Publish Date: Mon, 29 Jan 2024 (08:40 IST)
Updated Date: Mon, 29 Jan 2024 (08:53 IST)
ಹೈದರಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನ ಮುಖಭಂಗ ಅನುಭವಿಸಿದ ಬಳಿಕ ಅಭಿಮಾನಿಗಳು ರಿಷಬ್ ಪಂತ್ ರನ್ನು ನೆನೆಸಿಕೊಂಡಿದ್ದಾರೆ.
ರಿಷಬ್ ಪಂತ್ ಸದ್ಯಕ್ಕೆ ರಸ್ತೆ ಅಪಘಾತದಿಂದಾಗಿ ಕಳೆದ ಒಂದು ವರ್ಷದಿಂದ ಕ್ರಿಕೆಟ್ ಆಡುತ್ತಿಲ್ಲ. ಈಗಷ್ಟೇ ಚೇತರಿಸಿಕೊಂಡು ಫಿಟ್ನೆಸ್ ಮರಳುವ ಹಾದಿಯಲ್ಲಿದ್ದಾರೆ. ಡೆಲ್ಲಿಯ ಹೊಡೆಬಡಿಯ ಆಟಗಾರ ಟೆಸ್ಟ್ ಕ್ರಿಕೆಟ್ ನಲ್ಲಿ ಅನೇಕ ಸ್ಮರಣೀಯ ಇನಿಂಗ್ಸ್ ಗಳನ್ನು ಆಡಿದ್ದಾರೆ.
ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧ ಗಬ್ಬಾ ಮೈದಾನದಲ್ಲಿ ಆಡಿದ್ದ ಇನಿಂಗ್ಸ್ ಯಾರೂ ಮರೆಯುವಂತಿಲ್ಲ. ಟೆಸ್ಟ್ ಪಂದ್ಯದಲ್ಲಿ ತಂಡ ಸಂಕಷ್ಟದಲ್ಲಿರುವಾಗ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದು ತಮ್ಮ ನಿರ್ಬೀಢ ಶೈಲಿಯಿಂದ ಬ್ಯಾಟ್ ಬೀಸಿ ಎಷ್ಟೋ ಬಾರಿ ಪಂದ್ಯ ಗೆಲ್ಲಿಸಿದ್ದು ಇದೆ.
ನಿನ್ನೆಯ ಪಂದ್ಯದಲ್ಲೂ ಇದೇ ರೀತಿಯ ಸನ್ನಿವೇಶವಿತ್ತು. ಯಾರಾದರೂ ಒಬ್ಬರು ಕೆಳ ಕ್ರಮಾಂಕದಲ್ಲಿ ಗಟ್ಟಿಯಾಗಿ ನಿಂತು ಆಡಿದ್ದರೂ ಇಂಗ್ಲೆಂಡ್ ವಿರುದ್ಧ ಸೋಲಬೇಕಾಗಿರಲಿಲ್ಲ. ಆದರೆ ನಿಂತು ಆಡುವ ಆಟಗಾರರ ಕೊರತೆಯಿಂದಾಗಿ ಟೀಂ ಇಂಡಿಯಾ 28 ರನ್ ಗಳಿಂದ ಪಂದ್ಯ ಸೋತಿತು.
ಇದಾದ ಬಳಿಕ ಫ್ಯಾನ್ಸ್ ರಿಷಬ್ ಪಂತ್ ರನ್ನು ನೆನೆಸಿಕೊಂಡಿದ್ದಾರೆ. ಬಹುಶಃ ಅವರು ಇಂದು ತಂಡದಲ್ಲಿದ್ದಿದ್ದರೆ ಸೋಲುವ ಗತಿ ಬರುತ್ತಿರಲಿಲ್ಲ ಎಂದು ಮರುಗಿದ್ದಾರೆ. ಜೊತೆಗೆ ರೋಹಿತ್-ದ್ರಾವಿಡ್ ಟೆಸ್ಟ್ ಸ್ಪೆಷಲಿಸ್ಟ್ ಗಳಾದ ಅಜಿಂಕ್ಯಾ ರೆಹಾನೆ, ಚೇತೇಶ್ವರ ಪೂಜಾರ ಅವರಂತಹ ಆಟಗಾರರನ್ನು ಮೂಲೆಗುಂಪು ಮಾಡಿರುವುದಕ್ಕೂ ಛೀಮಾರಿ ಹಾಕಿದ್ದಾರೆ. ಆದರೆ ಸರಣಿಯಲ್ಲಿ ಇನ್ನೂ ನಾಲ್ಕು ಪಂದ್ಯಗಳಿದ್ದು, ಟೀಂ ಇಂಡಿಯಾ ತಿರುಗಿಬೀಳುವ ವಿಶ್ವಾಸದಲ್ಲಿದೆ.