ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ತೃತೀಯ ಟಿ20 ಪಂದ್ಯ ನಡೆಯಲಿದೆ. ಐದು ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಉಭಯ ತಂಡಗಳೂ ಒಂದೊಂದು ಪಂದ್ಯ ಗೆದ್ದಿದೆ.
ಕಳೆದ ಪಂದ್ಯದಲ್ಲಿ ಗೆದ್ದ ಉತ್ಸಾಹದಲ್ಲಿ ಟೀಂ ಇಂಡಿಯಾ ಈ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಹಾಗಿದ್ದರೂ ಪ್ರತೀ ಪಂದ್ಯದಲ್ಲಿ ಟೀಂ ಇಂಡಿಯಾ ಗಮನಾರ್ಹ ಬದಲಾವಣೆಯೊಂದಿಗೇ ಕಣಕ್ಕಿಳಿಯುತ್ತಿದೆ. ಕಳೆದ ಪಂದ್ಯದಲ್ಲಿ ಇಶಾನ್ ಕಿಶಾನ್ ಮತ್ತು ಸೂರ್ಯಕುಮಾರ್ ಯಾದವ್ ಪದಾರ್ಪಣೆ ಮಾಡಿದ್ದರು. ಈ ಪೈಕಿ ಇಶಾನ್ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದರು. ಸೂರ್ಯಕುಮಾರ್ ಯಾದವ್ ಗೆ ಬ್ಯಾಟಿಂಗ್ ಗೆ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಈ ಇಬ್ಬರೂ ಮತ್ತೆ ಇಂದಿನ ಪಂದ್ಯವಾಡಬಹುದು.
ಅದರ ಹೊರತಾಗಿ ರೋಹಿತ್ ಶರ್ಮಾ ಈ ಪಂದ್ಯಕ್ಕೆ ಕಮ್ ಬ್ಯಾಕ್ ಮಾಡಬಹುದಾಗಿದ್ದು, ಕೆಎಲ್ ರಾಹುಲ್ ಹೊರಗುಳಿಯುವ ಸಾಧ‍್ಯತೆಯಿದೆ. ಬೌಲಿಂಗ್ ನಲ್ಲಿ ಮೊಹಮ್ಮದ್ ಸಿರಾಜ್ ಗೆ ಒಂದು ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ. ಪಂದ್ಯ ಭಾರತೀಯ ಕಾಲಮಾನ ಪ್ರಕಾರ 7 ಗಂಟೆಗೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು.