ಹಗಲು ರಾತ್ರಿ ಟೆಸ್ಟ್ ಪಂದ್ಯವಾಡುವ ಭಾರತದ ಪ್ರಯತ್ನಕ್ಕೆ ಬಲ ತುಂಬಲಾಗುತ್ತಿದ್ದು, ಎಡೆನ್ ಗಾರ್ಡನ್ಸ್ ಮೈದಾನವು ದೇಶದ ಪ್ರಥಮ ನಸುಗೆಂಪು ಕ್ರಿಕೆಟ್ ಪಂದ್ಯವನ್ನು ಆಯೋಜಿಸಿದೆ. ರಾಜ್ಯದ ರಣಜಿ ಲೀಗ್ ತಂಡಕ್ಕೆ ಆಟಗಾರರನ್ನು ಗುರುತಿಸಲು ಬಂಗಾಳದಲ್ಲಿ ಆಯೋಜಿಸಿದ ಸೂಪರ್ ಲೀಗ್ ಫೈನಲ್ ಪಂದ್ಯವನ್ನು ಜೂ. 17ರಿಂದ 20ರವರೆಗೆ ಹಗಲು-ರಾತ್ರಿ ಆಡಿಸುವ ನಿರೀಕ್ಷೆಯಿದೆ. ಈ ಪ್ರಯೋಗವು ಮುಂದಿನ ಭವಿಷ್ಯದಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಯೋಜಿಸಲು ಭಾರತಕ್ಕೆ ನೆರವಾಗಲಿದೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ ಜನಪ್ರಿಯತೆ ಸ್ಥಿರವಾಗಿ ಕುಸಿಯುತ್ತಿದ್ದು, ಇದನ್ನು ತಡೆಯಲು ನಾವೇನಾದರೂ ಮಾಡಬೇಕಾಗಿದೆ. ಆಸ್ಟ್ರೇಲಿಯಾದಲ್ಲಿ ನಸುಗೆಂಪು ಚೆಂಡಿನ ಟೆಸ್ಟ್ ಪಂದ್ಯಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಾವು ಈ ಬದಲಾವಣೆಯನ್ನು ಸ್ವೀಕರಿಸಬೇಕು. ಹಗಲು ರಾತ್ರಿ ಟೆಸ್ಟ್ ಪಂದ್ಯಗಳ ಆಯೋಜನೆಗೆ ಸೂಪರ್ ಲೀಗ್ ಪಂದ್ಯವನ್ನು ಫ್ಲಡ್ ಲೈಟ್ ಅಡಿಯಲ್ಲಿ ಆಡಿಸುತ್ತಿರುವುದೊಂದು ಪ್ರಯೋಗವಾಗಿದ್ದು, ಇದೊಂದು ಒಳ್ಳೆಯ ಅನುಭವವಾಗಿದೆ ಎಂದು ಗಂಗೂಲಿ ಹೇಳಿದ್ದಾರೆ.
ಗಂಗೂಲಿ ಬಿಸಿಸಿಐ ತಾಂತ್ರಿಕ ಸಮಿತಿಯ ಮುಖ್ಯಸ್ಥರಾಗಿದ್ದು, ಅನುರಾಗ್ ಠಾಕುರ್ ನ್ಯೂಜಿಲೆಂಡ್ ವಿರುದ್ಧ ಫ್ಲಡ್‌ಲಿಟ್ ಟೆಸ್ಟ್‌ಗೆ ಯೋಜನೆ ಪ್ರಕಟಿಸಿದ ಬಳಿಕ ತಾಂತ್ರಿಕ ಸಮಿತಿಯು ದುಲೀಪ್ ಟ್ರೋಫಿ ಪಂದ್ಯಾವಳಿಯನ್ನು ನಸುಗೆಂಪು ಬಣ್ಣದಲ್ಲಿ ಆಡಲು ಶಿಫಾರಸು ಮಾಡಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.