ಮುಂಬೈ: ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಬ್ಯಾಟಿಗರ ಭರ್ಜರಿ ಫಾರ್ಮ್ ಮುಂದುವರಿದಿದೆ. ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ, ಶ್ರೇಯಸ್ ಅಯ್ಯರ್ ಶತಕದಿಂದಾಗಿ ಟೀಂ ಇಂಡಿಯಾ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 397 ರನ್ ಗಳ ಬೃಹತ್ ಮೊತ್ತ ಗಳಿಸಿದೆ.
ಕಳೆದ ಪಂದ್ಯದಲ್ಲಿ ಶತಕ ದಾಖಲಿಸಿದ್ದ ಶ್ರೇಯಸ್ ಅಯ್ಯರ್ ಇಂದೂ ಮತ್ತೊಮ್ಮೆ ಬಿರುಸಿನ ಆಟಕ್ಕೆ ಕೈ ಹಾಕಿ ಕೇವಲ 70 ಎಸೆತಗಳಲ್ಲಿ 105 ರನ್ ಗಳಿಸಿದರು. ಇದಕ್ಕೆ ಮೊದಲು ವಿರಾಟ್ ಕೊಹ್ಲಿ ವಿಶ್ವದಾಖಲೆಯ 50 ನೇ ಶತಕ ಸಿಡಿಸಿದ್ದರು.
ಇಂದು ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ-ಗಿಲ್ ಜೋಡಿ ಎಂದಿನಂತೇ ಅಬ್ಬರದ ಆರಂಭ ನೀಡಿದರು. ರೋಹಿತ್ ಕೇವಲ 29 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 47 ರನ್ ಚಚ್ಚಿ ಔಟಾದರು. ಬಳಿಕ ಶುಬ್ಮನ್ ಗಿಲ್ 65 ಎಸೆತಗಳಲ್ಲಿ 79 ರನ್ ಗಳಿಸಿದ್ದಾಗ ಗಾಯಗೊಂಡು ನಿವೃತ್ತಿಯಾದರು. ಬಳಿಕ ಕೊನೆಯಲ್ಲಿ ಮತ್ತೆ ಬ್ಯಾಟಿಂಗ್ ಗೆ ಬಂದ ಗಿಲ್ 80 ರನ್ ಗಳಿಸಿ ಅಜೇಯರಾಗುಳಿದರು. ಗಿಲ್ ಗಾಯಗೊಂಡು ನಿವೃತ್ತಿಯಾದ ಬಳಿಕ ಜೊತೆಯಾದ ಕೊಹ್ಲಿ-ಶ್ರೇಯಸ್ ಜೋಡಿ ಮತ್ತೊಮ್ಮೆ ಭಾರತಕ್ಕೆ ರನ್ ಹೊಳೆ ಹರಿಸಿದರು. ಕೊಹ್ಲಿ 113 ಎಸೆತಗಳಿಂದ 117 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಬಂದ ಕೆಎಲ್ ರಾಹುಲ್ ಕೇವಲ 20 ಎಸೆತಗಳಲ್ಲಿ 39 ರನ್ ಗಳಿಸಿದರು. ಇದರಿಂದಾಗಿ ಟೀಂ ಇಂಡಿಯಾ ಮತ್ತೊಮ್ಮೆ 350 ಪ್ಲಸ್ ರನ್ ಗಳಿಸಲು ಸಾಧ‍್ಯವಾಯಿತು. ನ್ಯೂಜಿಲೆಂಡ್ ಪರ ಟಿಮ್ ಸೌಥಿ 3 ವಿಕೆಟ್ ಕಬಳಿಸಿದರು. ಇದೀಗ ನ್ಯೂಜಿಲೆಂಡ್ ಸೆಮಿಫೈನಲ್ ಗೆಲ್ಲಲು 398 ರನ್ ಗಳ ಬೃಹತ್ ಮೊತ್ತ ಗಳಿಸಬೇಕಿದೆ.