ಅಹಮ್ಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಫೈನಲ್ ಗಿಂತಲೂ ಹೆಚ್ಚು ಕಳೆಗಟ್ಟುವ ಪಂದ್ಯವೆಂದರೆ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಪಂದ್ಯಕ್ಕೆ.
ಅದೂ ಈ ಬಾರಿ ಭಾರತದಲ್ಲೇ ವಿಶ್ವಕಪ್ ನಡೆಯುತ್ತಿರುವುದರಿಂದ ಈ ಎರಡು ಎದುರಾಳಿಗಳ ನಡುವಿನ ಕದನ ರೋಚಕತೆ ಮೇರೆ ಮೀರಿದೆ. ಅಹಮ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈಗಾಗಲೇ ಟಿಕೆಟ್ ಸೋಲ್ಡ್ ಔಟಾಗಿದ್ದು, ವಿಶ್ವದ ಬೃಹತ್ ಕ್ರೀಡಾಂಗಣದಲ್ಲಿ ಇಂದು ಭರ್ತಿಯಾಗಲಿದೆ.
ರೋಹಿತ್ ಶರ್ಮಾ ಪಡೆ ಈಗಾಗಲೇ ಆಡಿದ ಎರಡೂ ಪಂದ್ಯಗಳಲ್ಲಿ ಅಧಿಕಾರಯುತ ಗೆಲುವು ಪಡೆದಿದೆ. ಕಳೆದ ಪಂದ್ಯದಲ್ಲಿ ಅಗ್ರಕ್ರಮಾಂಕ ಸಿಡಿದಿದ್ದು ಭಾರತಕ್ಕೆ ನಿರಾಳವಾಗಿದೆ. ಬೌಲಿಂಗ್ ನಲ್ಲೂ ಭಾರತ ವೇಗ ಪ್ಲಸ್ ಸ್ಪಿನ್ನರ್ ಗಳ ಸಮತೋಲನ ಹೊಂದಿರುವುದರಿಂದ ಪ್ರಬಲ ತಂಡವಾಗಿದೆ.
ಆದರೆ ಪಾಕಿಸ್ತಾನ ಕೂಡಾ ಸುಲಭದ ಎದುರಾಳಿಯಲ್ಲ. ಮೊಹಮ್ಮದ್ ರಿಜ್ವಾನ್ ಫಾರ್ಮ್ ಗೆ ಮರಳಿರುವುದು ಭಾರತಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಇನ್ನು, ಶಾಹಿನ್ ಅಫ್ರಿದಿ, ಹ್ಯಾರಿಸ್ ರೌಫ್ ಒಳಗೊಂಡ ವೇಗದ ವಿಭಾಗ ಬಲಿಷ್ಠವಾಗಿದೆ. ಆದರೆ ಸೂಕ್ತ ಎಡಗೈ ಸ್ಪಿನ್ನರ್ ನ ಕೊರತೆ ಕಾಡಬಹುದು. ಈ ಜಿದ್ದಾಜಿದ್ದಿನ ಪಂದ್ಯ ಮಧ‍್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.