ಲಂಡನ್: ಭಾರತ ಮತ್ತು ಪಾಕಿಸ್ತಾನ ತಂಡದ ನಡುವೆ ನಿನ್ನೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಜಿದ್ದಾ ಜಿದ್ದಿನ ಫೈಟ್ ನಡೆಯಿತು. ಭಾರತ ಈ ಪಂದ್ಯವನ್ನು 124 ರನ್ ಗಳಿಂದ ಗೆಲ್ಲಲು ‘ದೇವರ’ ಕೃಪೆಯೂ ಇತ್ತು ಎಂದರೆ ನಂಬಲೇ ಬೇಕು.
ಅಷ್ಟಕ್ಕೂ ಈ ದೇವರು ಯಾರು ಗೊತ್ತಾ? ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್. ಹೌದು. ನಿನ್ನೆಯ ಪಂದ್ಯವನ್ನು ವೀಕ್ಷಿಸಲೆಂದೇ ಸಚಿನ್ ಪುತ್ರನ ಸಮೇತ ಇಂಗ್ಲೆಂಡ್ ಗೆ ಹಾರಿದ್ದರು. ವಿಶೇಷ ಗಣ್ಯರ ಸಾಲಿನಲ್ಲಿ ಕುಳಿತು ಪಂದ್ಯದುದ್ದಕ್ಕೂ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ಚಿಯರ್ ಮಾಡುತ್ತಲೇ ಇದ್ದರು.
ಅದಕ್ಕಿಂತಲೂ ಮೊದಲು ಟೀಂ ಇಂಡಿಯಾ ಆಟಗಾರರನ್ನು ಭೇಟಿಯಾಗಿ ಕೆಲವು ಉಪಯುಕ್ತ ಸಲಹೆಗಳನ್ನೂ ನೀಡಿದರು. ಕೊನೆಗೆ ಟೀಂ ಇಂಡಿಯಾ ಆಟಗಾರರು ಸಚಿನ್ ಜತೆ ಸೆಲ್ಫಿ ತೆಗೆದು ಸಂಭ್ರಮಿಸಿದರು.
ಕ್ರಿಕೆಟ್ ದೇವರ ಆಶೀರ್ವಾದದ ಫಲವೋ ಎಂಬಂತೆ ಟೀಂ ಇಂಡಿಯಾ ಈ ಪಂದ್ಯದಲ್ಲಿ 124 ರನ್ ಗಳಿಂದ ಗೆಲುವು ಸಾಧಿಸಿತು. ನಡುವೆ ಮಳೆ ಬಂದು ಪಂದ್ಯಕ್ಕೆ ಅಡ್ಡಿ ಮಾಡಿದರೂ, ಫಲಿತಾಂಶಕ್ಕೆ ತೊಂದರೆಯಾಗಲಿಲ್ಲ.
ಭಾರತ 48 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 319 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಪಾಕ್ ಭಾರತದ ಕರಾರುವಾಕ್ ದಾಳಿಗೆ ತತ್ತರಿಸಿ 164 ರನ್ ಗಳಿಗೆ ಆಲೌಟ್ ಆಯಿತು. ಉಮೇಶ್ ಯಾದವ್ 3 ವಿಕೆಟ್ ಕಿತ್ತರೆ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಕಿತ್ತರು. ಅಂತೂ ಭಾರತದಲ್ಲಿ ಪಾಕ್ ವಿರುದ್ಧ ಯುದ್ಧ ಗೆದ್ದಷ್ಟೇ ಸಂಭ್ರಮ!