ಕಾನ್ಪುರ: ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಅವಕಾಶ ಸಿಕ್ಕರೂ ಕೆಎಲ್ ರಾಹುಲ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಅವರ ಬ್ಯಾಟಿಂಗ್ ಅಷ್ಟೇನೂ ಉತ್ತಮವಾಗಿಲ್ಲ. ಹೀಗಾಗಿ ಎರಡನೇ ಟೆಸ್ಟ್ ಪಂದ್ಯಕ್ಕೆ ಮುನ್ನ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.
ಟೀಂ ಇಂಡಿಯಾದ ಕ್ಲಾಸ್ ಆಟಗಾರರಲ್ಲಿ ಕೆಎಲ್ ರಾಹುಲ್ ಕೂಡಾ ಒಬ್ಬರು. ಆದರೆ ಅವರು ತಮಗಿರುವ ಕೌಶಲ್ಯವನ್ನು ಸರಿಯಾಗಿ ಉಪಯೋಗಿಸಿಕೊಂಡು ಅದಕ್ಕೆ ತಕ್ಕ ಆಟವಾಡುತ್ತಿಲ್ಲ ಎಂಬ ಅಪವಾದ ಅವರ ಮೇಲಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ನಾಯಕ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಅತ್ಯುತ್ತಮ ಆಟಗಾರ. ಅವರು ಪ್ರೂವ್ ಮಾಡಲು ಮತ್ತೊಂದು ಅವಕಾಶ ನೀಡುತ್ತಿದ್ದೇವೆ. ಬಳಸಿಕೊಳ್ಳುವುದು ಅವರಿಗೆ ಬಿಟ್ಟಿದ್ದು ಎಂದಿದ್ದರು.
ಆದರೆ ಯಾಕೋ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಅಗತ್ಯವಿದ್ದಾಗಲೇ ಕೈಕೊಟ್ಟು ತೀರಾ ಟೀಕೆಗೆ ಗುರಿಯಾಗಿದ್ದರು. ದುಲೀಪ್ ಟ್ರೋಫಿಯಲ್ಲೂ ಅದೇ ಕತೆಯಾಗಿತ್ತು. ಹೀಗಾಗಿ ಕೆಲವರು ಅವರನ್ನು ತಂಡದಿಂದ ಕಿತ್ತು ಹಾಕಿ ಸರ್ಫರಾಜ್ ಖಾನ್ ಗೆ ಅವಕಾಶ ನೀಡಬೇಕು ಎನ್ನುತ್ತಿದ್ದಾರೆ.
ಹೀಗಾಗಿ ರಾಹುಲ್ ಈಗ ಪ್ರದರ್ಶನ ನೀಡಲೇಬೇಕಾದ ಒತ್ತಡದಲ್ಲಿದ್ದಾರೆ. ಈ ನಡುವೆ ಅವರಿಗೆ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಬೆಂಬಲ ಸಿಕ್ಕಿದೆ. ರಾಹುಲ್ ಖಂಡಿತಾ ಪುಟಿದೇಳುತ್ತಾರೆ. ಅವರಿಗೆ ಮತ್ತೊಂದು ಅವಕಾಶ ನೀಡಲಿದ್ದೇವೆ ಎಂದಿದ್ದಾರೆ. ಆ ಮೂಲಕ ನಾಳೆಯಿಂದ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯ ರಾಹುಲ್ ಪಾಲಿಗೆ ಮಹತ್ವದ್ದಾಗಲಿದೆ.