ಶ್ರೀಲಂಕಾ ಟಾಪ್ ಶ್ರೇಯಾಂಕದ ಆಸ್ಟ್ರೇಲಿಯಾ ವಿರುದ್ಧ 106 ರನ್ ಗೆಲುವು ಗಳಿಸಿದ ಬಳಿಕ ಶ್ರೀಲಂಕಾ ನಾಯಕ ಏಂಜಲೊ ಮ್ಯಾಥೀವ್ಸ್ ಅವರು ಶತಕವೀರ ಕುಸಾಲ್ ಮೆಂಡಿಸ್ ಆಟವನ್ನು ಮನಸಾರೆ ಶ್ಲಾಘಿಸಿದ್ದಾರೆ. ರಂಗನಾಥ್ ಹೆರಾತ್ ನೇತೃತ್ವದ ಶ್ರೀಲಂಕಾ ಸ್ಪಿನ್ನರ್‌ಗಳು ಮುಖ್ಯ ಪಾತ್ರವಹಿಸಿದ್ದರೂ, ಮೆಂಡಿಸ್ ಆತಿಥೇಯರಿಗೆ ಮುಖ್ಯ ತಿರುವು ಒದಗಿಸಿದ್ದರು.
21 ವರ್ಷದ ಮೆಂಡಿಸ್ ಅವರ 176 ರನ್ ಸ್ಕೋರಿನಲ್ಲಿ 21 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಇದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 353 ರನ್ ಸ್ಕೋರ್ ಮುಟ್ಟಲು ಸಾಧ್ಯವಾಯಿತು.
ಎಡಗೈ ಸ್ಪಿನ್ನರ್ ಹೆರಾತ್ ಬಳಿಕ ತಮ್ಮ ಸ್ಪಿನ್ ದಾಳಿಯಿಂದ 54ಕ್ಕೆ 5 ವಿಕೆಟ್ ಕಬಳಿಸಿದ್ದರಿಂದ ಆಸ್ಟ್ರೇಲಿಯಾ 161ಕ್ಕೆ ಔಟ್ ಆಗಿತ್ತು.
ಇದೊಂದು ಮಹತ್ತರ ಜಯವಾಗಿದ್ದು, ಕುಶಾಲ್ ಮೆಂಡಿಸ್‌ಗೆ ಈ ಗೆಲುವಿನ ಕ್ರೆಡಿಟ್ ಹೋಗುತ್ತದೆ ಎಂದು ಮ್ಯಾಥೀವ್ಸ್ ತಿಳಿಸಿದರು. ವಿಕೆಟ್ ಸ್ಪಿನ್ನರುಗಳಿಗೆ ನೆರವಾಗಿದ್ದು ರಂಗನಾಥ್ ಹೆರಾತ್ ತಮ್ಮ ಬೌಲಿಂಗ್ ಪ್ರತಿಭೆಯನ್ನು ಸಾಬೀತು ಮಾಡಿದ್ದಾರೆ.
17 ವರ್ಷಗಳ ಬಳಿಕ ಆಸ್ಟ್ರೇಲಿಯಾವನ್ನು ಸೋಲಿಸಿದ್ದು ಸಂತಸ ತಂದಿದೆ. ಇದು ಬಲಿಷ್ಠ ಆಸ್ಟ್ರೇಲಿಯಾ ತಂಡವಾಗಿದ್ದು ನಂಬರ್ ಒನ್ ಶ್ರೇಯಾಂಕ ಹೊಂದಿದ್ದಾರೆ. ನಾವು ಕಳೆದ ಬಾರಿ ಆಸೀಸ್ ವಿರುದ್ಧ ಗೆದ್ದಾಗ ನಾನು ಚಿಕ್ಕ ಬಾಲಕನಾಗಿದ್ದೆ ಎಂದು ಮ್ಯಾಥೀವ್ಸ್ ಹೇಳಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.