ಚೆನ್ನೈ: ಐಪಿಎಲ್‌ನಲ್ಲಿ ಈ ಬಾರಿ ಆಡಿರುವ ಏಳು ಪಂದ್ಯಗಳಲ್ಲಿ ಐದರಲ್ಲಿ ಸೋತು ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್‌ಗೆ ಪ್ರಬಲ ಆಲ್‌ರೌಂಡ್ ಆಟಗಾರನ ಆಗಮನವಾಗಿದ್ದು, ತಂಡವು ಪುಟಿದೇಳುವ ನಿರೀಕ್ಷೆ ಮೂಡಿಸಿದೆ.
ದಕ್ಷಿಣ ಆಫ್ರಿಕಾದ ಯುವ ಆಲ್‌ರೌಂಡರ್ ಡೆವಾಲ್ಡ್ ಬ್ರೆವಿಸ್ ಅವರು ಚೆನ್ನೈ ತಂಡವನ್ನು ಸೇರಿಕೊಂಡಿದ್ದಾರೆ. ಚೆನ್ನೈ ತಂಡದಲ್ಲಿದ್ದ ವೇಗಿ ಗುರಜಪನೀತ್ ಸಿಂಗ್ ಗಾಯಗೊಂಡಿದ್ದು, ಅವರ ಸ್ಥಾನವನ್ನು ಬ್ರೆವಿಸ್ ತುಂಬುವರು. ಹೀಗಾಗಿ, ಮಹೇಂದ್ರ ಸಿಂಗ್ ಧೋನಿ ಪಡೆಗೆ ಶಕ್ತಿ ಬಂದಂತಾಗಿದೆ.
21 ವರ್ಷ ವಯಸ್ಸಿನ ಬ್ರೆವಿಸ್ ಈಗಾಗಲೇ ಐಪಿಎಲ್, ಸಿಪಿಎಲ್, ಎಂಎಲ್‌ಸಿ ಮತ್ತು ಎಸ್‌ಎ20 ಟೂರ್ನಿಗಳಲ್ಲಿ ಆಡಿದ್ದಾರೆ. ಈ ವರ್ಷ ಎಸ್‌ಎ 20 ಲೀಗ್‌ನಲ್ಲಿ ಎಂಐ ಕೇಪ್ ಟೌನ್ ತಂಡ ಮೊದಲ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಅವರ ಪಾತ್ರ ಪ್ರಮುಖ. 184.17ರ ಸ್ಟ್ರೈಕ್‌ರೇಟ್‌ನಲ್ಲಿ ಅವರು 291 ರನ್ ಬಾರಿಸಿದ್ದು, ಸರ್ವಾಧಿಕ ಸ್ಕೋರ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಆರನೇ ಸ್ಥಾನ ಗಳಿಸಿದ್ದರು.
ಈ ಹಿಂದೆ 2022 ಮತ್ತು 2024ರಲ್ಲಿ ಮುಂಬೈ ಇಂಡಿಯನ್ಸ್ ಪರ ಅವರು ಒಟ್ಟು 10 ಪಂದ್ಯಗಳನ್ನು ಆಡಿದ್ದರು. ಅವರ ಆಟ ದಿಗ್ಗಜ ಬ್ಯಾಟರ್ ಎಬಿ ಡಿ ವಿಲಿಯರ್ಸ್ ಆಟವನ್ನು ಹೋಲುವ ಕಾರಣ ಅವರನ್ನು ಬೇಬಿ ಎಬಿ ಎಂದೂ ಕರೆಯಲಾಗುತ್ತಿದೆ. ಅವರು ₹2.2 ಕೋಟಿ ಮೊತ್ತಕ್ಕೆ ಸಿಎಸ್‌ಕೆ ಪಾಲಾಗಿದ್ದಾರೆ.