Publish Date: Tue, 12 Sep 2023 (08:30 IST)
Updated Date: Tue, 12 Sep 2023 (08:32 IST)
ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಸತತ ಮೂರನೇ ದಿನ ಟೀಂ ಇಂಡಿಯಾ ಪಂದ್ಯವಾಡುತ್ತಿದೆ. ಇಂದು ಎರಡನೆಯ ಸೂಪರ್ ಫೋರ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸುತ್ತಿದೆ.
ಶ್ರೀಲಂಕಾ ಈಗಾಗಲೇ ಒಂದು ಪಂದ್ಯವಾಡಿದ್ದು ಗೆಲುವು ಕಂಡಿದೆ. ಇತ್ತ ಭಾರತ ಕೂಡಾ ನಿನ್ನೆಯಷ್ಟೇ ಪಾಕ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಹೀಗಾಗಿ ಇಂದಿನ ಪಂದ್ಯ ಮಹತ್ವದ್ದಾಗಿದೆ.
ಟೀಂ ಇಂಡಿಯಾ ಸತತ ಮೂರನೇ ದಿನ ಪಂದ್ಯವಾಡುತ್ತಿರುವುದರಿಂದ ಆಟಗಾರರ ಹಿತ ದೃಷ್ಟಿಯಿಂದ ಕೆಲವು ಬದಲಾವಣೆ ಮಾಡಿಕೊಳ್ಳುವ ಸಾಧ‍್ಯತೆಯಿದೆ. ವೇಗಿ ಜಸ್ಪ್ರೀತ್ ಬುಮ್ರಾ ನಿನ್ನೆಯ ಪಂದ್ಯದಲ್ಲೇ ಕೇವಲ 5 ಓವರ್ ನಡೆಸಿ ವಿಶ್ರಾಂತಿ ಪಡೆದಿದ್ದರು. ಹೀಗಾಗಿ ಇಂದಿನ ಪಂದ್ಯದಲ್ಲಿ ಆಡುವುದು ಅನುಮಾನ. ಅವರ ಸ್ಥಾನದಲ್ಲಿ ಮೊಹಮ್ಮದ್ ಶಮಿ ಅವಕಾಶ ಪಡೆಯಬಹುದು. ಬ್ಯಾಟಿಂಗ್ ನಲ್ಲೂ ಕೆಲವು ಆಟಗಾರರಿಗೆ ವಿಶ್ರಾಂತಿ ದೃಷ್ಟಿಯಿಂದ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಮಾಡಿದರೂ ಅಚ್ಚರಿಯಿಲ್ಲ. ಹಾಗಿದ್ದರೂ ಸೂಪರ್ ಫೋರ್ ಪಂದ್ಯವಾಗಿರುವುದರಿಂದ ಭಾರತ ಆಡುವ ಬಳಗದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವಂತೆಯೂ ಇಲ್ಲ. ಈ ಪಂದ್ಯ ಅಪರಾಹ್ನ 3 ಗಂಟೆಗೆ ಆರಂಭವಾಗುವುದು.