ಮುಂಬೈನಲ್ಲಿ ನಾಳೆ ನಡೆಯಲಿರುವ ತುರ್ತು ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯು ಸುಪ್ರೀಂಕೋರ್ಟ್ ಕೋಪಕ್ಕೆ ಗುರಿಯಾಗಬಹುದು ಎಂದು ಬಿಹಾರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಆದಿತ್ಯ ವರ್ಮಾ ಹೇಳಿದ್ದಾರೆ. ಪಾಟ್ನಾದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ವರ್ಮಾ, ಸಭೆಯಲ್ಲಿ ಭಾಗವಹಿಸುವ ಬಹುತೇಕ ಅಧಿಕಾರಿಗಳು ಹುದ್ದೆಗಳನ್ನು ಅಕ್ರಮವಾಗಿ ಹೊಂದಿದ್ದು, ಈ ಕಾರ್ಯಕಾರಿ ಸಮಿತಿಯು ಕಾನೂನುಬದ್ಧವಲ್ಲ ಎಂದು ಹೇಳಿದರು.
ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್, ಐವರು ಉಪಾಧ್ಯಕ್ಷರಾದ ಮ್ಯಾಥೀವ್, ಸಿ.ಕೆ. ಖನ್ನಾ, ಗೌತಮ್ ರಾಯ್, ಎಂ.ಎಲ್. ನೆಹ್ರೂ ಮತ್ತು ಜಿ ಗಂಗಾರಾಜು, ಕಾರ್ಯದರ್ಶಿ ಅಜಯ್ ಶಿರ್ಕೆ, ಕೋಶಾಧಿಕಾರಿ ಅನಿರುದ್ ಚೌಧರಿ ಮತ್ತು ಜಂಟಿ ಕಾರ್ಯದರ್ಶಿ ಅಮಿತಾಬ್ ಚೌಧರಿ ಬಿಸಿಸಿಐ ಅಥವಾ ಆಯಾ ರಾಜ್ಯ ಸಂಸ್ಥೆಗಳಲ್ಲಿ 9 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ.
ಲೋಧಾ ಸಮಿತಿಯ ಶಿಫಾರಸಿನಲ್ಲಿ ಯಾವುದೇ ವ್ಯಕ್ತಿ 9 ವರ್ಷಕ್ಕಿಂತ ಹೆಚ್ಚು ಅಧಿಕಾರದಲ್ಲಿರುವುದನ್ನು ನಿಷೇಧಿಸುತ್ತದೆ. ಆದ್ದರಿಂದ ಇವೆಲ್ಲಾ ಅಧಿಕಾರಿಗಳು ತಮ್ಮ ಹುದ್ದೆಗಳನ್ನು ಕಾನೂನುಬಾಹಿರವಾಗಿ ಹೊಂದಿದ್ದಾರೆಂದು ಸಾಬೀತುಮಾಡುತ್ತದೆ ಎಂದು ವರ್ಮಾ ಹೇಳಿದರು.
ಬಿಸಿಸಿಐ ಎಲ್ಲಾ ಶಿಫಾರಸುಗಳನ್ನು ನಾಲ್ಕರಿಂದ ಆರು ತಿಂಗಳ ನಡುವೆ ಅನುಷ್ಠಾನಕ್ಕೆ ತರಲು ಶಿಫಾರಸು ಮಾಡಿದ್ದು ಚಿತ್ರಣ ಸಂಪೂರ್ಣ ಭಿನ್ನವಾಗಿರುತ್ತದೆಂದು ಆಶಿಸುತ್ತೇನೆ ಎಂದು ವರ್ಮಾ ಹೇಳಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.