Select Your Language

Notifications

webdunia
webdunia
webdunia
webdunia

ಮಾರ್ಕೆಟ್ನಲ್ಲಿ ಮೂರನೇ ಅಲೆ : ಸ್ವಾಗತ ಕೋರುತ್ತಿರೋ ಜನ,ಎಲ್ಲೆಡೆ ಜನಜಾತ್ರೆ,ವಿಪರೀತ ರಶ್ !

ಮಾರ್ಕೆಟ್ನಲ್ಲಿ ಮೂರನೇ ಅಲೆ : ಸ್ವಾಗತ ಕೋರುತ್ತಿರೋ ಜನ,ಎಲ್ಲೆಡೆ ಜನಜಾತ್ರೆ,ವಿಪರೀತ ರಶ್ !
ಬೆಂಗಳೂರು , ಬುಧವಾರ, 7 ಜುಲೈ 2021 (16:30 IST)
Corona in Market:: ಸದ್ಯಕ್ಕಂತೂ ಕೆ ಆರ್ ಮಾರುಕಟ್ಟೆ ಮಾತ್ರವಲ್ಲದೆ ಬಹುತೇಕ ಎಲ್ಲಾ ಮಾರ್ಕೆಟ್ಗಳ ಪರಿಸ್ಥಿತಿಯೂ ಬಹುತೇಕ ಹೀಗೇ ಇದೆ. ಕೊರೊನಾ ಮೂರನೇ ಅಲೆಗೆ ಜನ ಮುಕ್ತ ಆಹ್ವಾನ ನೀಡುತ್ತಿದ್ದಾರೆ. ಮಾರ್ಕೆಟ್ ಚಿತ್ರಣ ನೋಡಿದ್ರೆ ಯಾಕೋ ಮೂರನೇ ಅಲೆ ಇಲ್ಲಿಂದಲೇ ಆರಂಭವಾಗುತ್ತದೆ ಎನಿಸುವಂತಿದೆ.

Covid Lockdown: ಕೊರೊನಾ ವೈರಸ್ ಹಾವಳಿ ಇನ್ನೂ ಮುಗಿದಿಲ್ಲ. ಮೊದಲ ಮತ್ತು ಎರಡನೇ ಅಲೆಯಲ್ಲಿ ಸಾಕಷ್ಟು ಸಾವುನೋವುಗಳಾಗಿದೆ. ಅನೇಕರು ತಮ್ಮ ಪ್ರೀತಿಪಾತ್ರರನ್ನ, ಕುಟುಂಬಸ್ಥರನ್ನು ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದ ನಂತರ ಎಚ್ಚೆತ್ತುಕೊಂಡಿದ್ದಾರಾ? ಖಂಡಿತಾ ಇಲ್ಲ. ವಾರಗಟ್ಟಲೆ ಲಾಕ್ಡೌನ್ ವಿಧಿಸಿ, ಎಲ್ಲರೂ ಅವರವರ ಮನೆಯೊಳಗೇ ಬಂಧಿಯಾಗಿ ಇರುವಂತೆ ಮಾಡಿದ್ರೂ ಜನ ಮಾತ್ರ ಇನ್ನೂ ಬುದ್ಧಿ ಕಲಿತಂತೆ ಕಾಣೋದಿಲ್ಲ. ಲಾಕ್ ಡೌನ್ ತೆರವಾಗಿ ಇನ್ನೂ ಎರಡು ದಿನ ಆಗಿದೆ ಅಷ್ಟೇ. ಅಷ್ಟರಲ್ಲಾಗಲೇ ಜನ ನಾ ಮುಂದು ತಾ ಮುಂದು ಎಂದು ಮಾರುಕಟ್ಟಗಳಲ್ಲಿ ಗುಂಪುಗೂಡುತ್ತಿದ್ದಾರೆ. ಮಾರ್ಷಲ್ಗಳ ಮೂಲಕ ಅದೆಷ್ಟೇ ದಂಡ ವಿಧಿಸಿದರೂ, ಎಷ್ಟೇ ಎಚ್ಚರಿಕೆ ನೀಡಿದರೂ ಯಾವುದೂ ಪ್ರಯೋಜನವಾದಂತೆ ಕಾಣುತ್ತಿಲ್ಲ. ಇಂದು ಬೆಳಗ್ಗೆ ಕೂಡಾ ರಾಜಧಾನಿ ಬೆಂಗಳೂರಿನ ಕೆ ಆರ್ ಮಾರುಕಟ್ಟೆಯ ಚಿತ್ರಣ ಹೀಗೇ ಇತ್ತು.

ಎಲ್ಲಿ ನೋಡಿದ್ರೂ ಜನ, ಎತ್ತ ಕಣ್ಣುಹಾಯಿಸಿದರೂ ಜನಜಾತ್ರೆ. ಎಷ್ಟರಮಟ್ಟಿಗೆ ಜನ ಮಾರುಕಟ್ಟೆಯಲ್ಲಿ ಸೇರಿದ್ದಾರೆ ಎಂದರೆ ಕೊರೊನಾ ಬಗ್ಗೆ ಅರಿವು ಇರುವವರಾದರೆ ಆ ಜನಜಂಗುಳಿಯನ್ನು ನೋಡಿ ಅಲ್ಲಿಂದ ಕಾಲ್ಕೀಳೋದು ಗ್ಯಾರಂಟಿ. ಆದರೆ ಇಲ್ಲಿರೋ ಜನ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಂತೆ ಕಾಣುವುದಿಲ್ಲ. ಕೋವಿಡ್ ಹರಡುವುದನ್ನು ತಡೆಯಬೇಕೆಂದರೆ ಮೊದಲು ಮಾರುಕಟ್ಟೆಯನ್ನು ಸ್ಥಳಾಂತರ ಮಾಡಬೇಕು ಎಂದು ಬಿಬಿಎಂಪಿ ನಿರ್ಧರಿಸಿತ್ತು. ಆದ್ದರಿಂದ ಎರಡನೇ ಅಲೆಯಲ್ಲಿ ಸೋಂಕಿನ ಆರ್ಭಟ ಹೆಚ್ಚಾದಾಗ ಕೆ ಆರ್ ಮಾರ್ಕೆಟ್ಟಿನ ತರಕಾರಿ ಮಾರುಕಟ್ಟೆಯನ್ನು ದೂರದ ಎಲೆಕ್ಟ್ರಾನಿಕ್ ಸಿಟಿಗೆ ವರ್ಗಾಯಿಸಲಾಗಿತ್ತು. ಕೇವಲ ಹೂವಿನ ಮಾರುಕಟ್ಟೆ ಮಾತ್ರ ಬೆಳಗ್ಗೆ 9 ಗಂಟೆಯವರಗೆ ಇದ್ದು ವ್ಯಾಪಾರ ನಡೆಸಲು ಅವಕಾಶ ನೀಡಲಾಗಿತ್ತು. ಹೀಗಿದ್ದಾಗಲೂ ಜನ ಕುಂಟು ನೆಪ ಹೇಳಿ ಮಾರುಕಟ್ಟೆಗೆ ಸುಖಾಸುಮ್ಮನೆ ಬರೋದು ತಪ್ಪಿರಲಿಲ್ಲ.

 
ದಿನಗಟ್ಟಲೆ ಜನರನ್ನು ಕಾಯೋದು, ಅವರಿಗೆ ಫೈನ್ ಹಾಕೋದು, ಅವರ ವಾದ ವಿವಾದ ಆಲಿಸೋದು.. ಪೋಲೀಸರು ಮತ್ತು ಮಾರ್ಷಲ್ಗಳಿಗೆ ಇದೇ ಕೆಲಸವಾಗಿಬಿಡ್ತು. ಸಾಲದ್ದಕ್ಕೆ ವ್ಯಾಪಾರಿಗಳು ಕಂಡಕಂಡಲ್ಲಿ ರಸ್ತೆ ಬದಿಯಲ್ಲೆಲ್ಲಾ ಅಂಗಡಿ ತೆರೆಯೋಕೆ ಶುರು ಮಾಡಿದ್ರು. ತಳ್ಳುವ ಗಾಡಿಗಳಲ್ಲಿ ವ್ಯಾಪಾರ ಮಾಡೋಕೆ ಹೆಚ್ಚಿನ ಸಮಯದ ಅವಕಾಶ ನೀಡಲಾಗಿತ್ತು. ಆದರೂ ಕೆ ಆರ್ ಮಾರ್ಕೆಟ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲೇ ವ್ಯಾಪಾರ ಮಾಡುವ ಪಟ್ಟು ಹಿಡಿದಂತೆ ಕಾಣುತ್ತಿತ್ತು. ಜನರ ಜೀವ ಉಳಿಯಬೇಕು, ಉಳಿದೆಲ್ಲವೂ ನಂತರವಷ್ಟೇ ಎಂದು ಎಷ್ಟೇ ಹೇಳಿದ್ರೂ ಜನ ಕೇಳದಂತಾಗಿದ್ದಾರೆ. ಆದರೆ ಇದರ ನಡುವೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಅಥವಾ ಲಸಿಕೆ ತೆಗೆದುಕೊಳ್ಳಿ, ಎಲ್ಲವೂ ಉಚಿತವಾಗಿ ದೊರೆಯುತ್ತದೆ ಎಂದರೆ ಮಾತ್ರ ಯಾರೂ ಮುಂದೆ ಬರೋದಿಲ್ಲ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಸದ್ಯಕ್ಕಂತೂ ಕೆ ಆರ್ ಮಾರುಕಟ್ಟೆ ಮಾತ್ರವಲ್ಲದೆ ಬಹುತೇಕ ಎಲ್ಲಾ ಮಾರ್ಕೆಟ್ಗಳ ಪರಿಸ್ಥಿತಿಯೂ ಬಹುತೇಕ ಹೀಗೇ ಇದೆ. ಕೊರೊನಾ ಮೂರನೇ ಅಲೆಗೆ ಜನ ಮುಕ್ತ ಆಹ್ವಾನ ನೀಡುತ್ತಿದ್ದಾರೆ. ಮಾರ್ಕೆಟ್ ಚಿತ್ರಣ ನೋಡಿದ್ರೆ ಯಾಕೋ ಮೂರನೇ ಅಲೆ ಇಲ್ಲಿಂದಲೇ ಆರಂಭವಾಗುತ್ತದೆ ಎನಿಸುವಂತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯಕ್ಕೆ ರಾಮಬಾಣ ತುಳಸಿ