ಮುಂಬೈ: ಹುಡುಗರು ಸಿನಿಮಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜರಿವಾಲಾ ಕೊನೆಯ ದಿನ ಮಾಡಿದ ಈ ಒಂದು ತಪ್ಪೇ ಅವರ ಜೀವಕ್ಕೆ ಕುತ್ತಾಯ್ತು ಎನ್ನಲಾಗುತ್ತಿದೆ. ಅಷ್ಟಕ್ಕೂ ಆಕೆಯ ಕೊನೆಯ ದಿನ ಹೇಗಿತ್ತು ಇಲ್ಲಿದೆ ನೋಡಿ ವಿವರ.
ಜೂನ್ 27 ರಂದು ತಡರಾತ್ರಿ 42 ವರ್ಷದ ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅರೋಗ್ಯವಾಗಿದ್ದ ನಟಿಗೆ ಇದ್ದಕ್ಕಿದ್ದಂತೆ ಏನಾಯ್ತು ಎಂದು ಎಲ್ಲರಿಗೂ ಆಘಾತವಾಗಿತ್ತು. ಇದೀಗ ಆಕೆಯ ಆರೋಗ್ಯದ ಬಗ್ಗೆ ನಾನಾ ಸುದ್ದಿಗಳು ಕೇಳಿಬರುತ್ತಿವೆ.
ಶೆಫಾಲಿ ಲೋ ಬಿಪಿಯಿಂದಾಗಿ ಕುಸಿದುಬಿದ್ದಿರಬಹುದು ಎಂದು ಪೋಸ್ಟ್ ಮಾರ್ಟಂ ಮಾಡಿದ ವೈದ್ಯರು ಶಂಕಿಸಿದ್ದರು. ಅಷ್ಟಕ್ಕೂ ಆಕೆಗೆ ಲೋ ಬಿಪಿ ಆಗಲು ಕಾರಣ ಏನಿರಬಹುದು ಎಂದು ಹುಡುಕುತ್ತಾ ಹೋದರೆ ಕೊನೆಯ ದಿನ ಆಕೆ ಉಪವಾಸವೇ ಕಾರಣ ಎನ್ನಬಹುದು.
ಮೂಲಗಳ ಪ್ರಕಾರ ಯಾವುದೇ ಪೂಜೆ ನಿಮಿತ್ತ ಶೆಫಾಲಿ ಅಂದು ಉಪವಾಸವಿದ್ದರಂತೆ. ಉಪವಾಸವಿದ್ದಾಗ ಮಾತ್ರೆ ತೆಗೆದುಕೊಂಡಿದ್ದರಿಂದ ಈ ರೀತಿ ಆಗಿರಬಹುದು ಎಂದು ಈಗ ಹೇಳಲಾಗುತ್ತಿದೆ. ಆ ದಿನ ಮನೆಯಲ್ಲಿ ಸತ್ಯನಾರಾಯಣ ಪೂಜೆಯಿತ್ತು. ಪೂಜೆ ನಿಮಿತ್ತ ಶೆಫಾಲಿ ಉಪವಾಸವಿದ್ದರು. ವ್ರತ ಎಲ್ಲಾ ಮುಗಿದ ಬಳಿಕ ಆಕೆ ಆಹಾರ ಸೇವನೆ ಮಾಡಿದ್ದಾರೆ. ಆಹಾರ ಸೇವನೆ ಮಾಡಿದ ತಕ್ಷಣ ಆಕೆ ಕುಸಿದುಬಿದ್ದಿದ್ದಾರೆ ಎಂದು ಆಕೆಯ ಪತಿ ಪರಾಗ್ ತ್ಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶೆಫಾಲಿ ಕುಸಿದು ಬೀಳುವಾಗ ಪರಾಗ್ ಕೆಳಗೆ ನಾಯಿ ಜೊತೆ ವಾಕಿಂಗ್ ಮಾಡುತ್ತಿದ್ದರಂತೆ. ಮನೆಕೆಲಸದಾಕೆ ಫೋನ್ ಮಾಡಿ ತಿಳಿಸಿದ ಬಳಿಕ ಪರಾಗ್ ಓಡೋಡಿ ಬಂದಿದ್ದಾರೆ.