ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ತೀವ್ರ ನಿರ್ಜಲೀಕರಣಕ್ಕೊಳಗಾಗಿದ್ದರಿಂದ ಆಸ್ಪತ್ರೆಗೆ ಸೇರಿದ್ದರು ಎನ್ನಲಾಗಿತ್ತು. ಇದೀಗ ಅವರು ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಅವರ ಅನಾರೋಗ್ಯಕ್ಕೆ ಬೇರೆಯೇ ಕಾರಣವಿದೆ ಎಂದು ತಿಳಿದುಬಂದಿದೆ.
ಶಾರುಖ್ ಖಾನ್ ಐಪಿಎಲ್ ನಲ್ಲಿ ಕೆಕೆಆರ್ ತಂಡದ ಸಹ ಮಾಲಿಕ. ಇತ್ತೀಚೆಗೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಅಹಮ್ಮದಾಬಾದ್ ನಲ್ಲಿ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಶಾರುಖ್ ಭಾಗಿಯಾಗಿದ್ದರು. ಅದಾದ ಬಳಿಕ ಅವರು ಅನಾರೋಗ್ಯಕ್ಕೀಡಾಗಿದ್ದರು. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ನಿರ್ಜಲೀಕರಣಕ್ಕೊಳಗಾಗಿದ್ದರಿಂದ ತೀವ್ರ ಸುಸ್ತಾಗಿರುವುದಕ್ಕೆ ಶಾರುಖ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಾಗಿತ್ತು. ಆದರೆ ಇದೀಗ ಬಂದಿರುವ ವರದಿ ಪ್ರಕಾರ ಶಾರುಖ್ ಗೆ ವೈರಲ್ ಜ್ವರವಾಗಿತ್ತು. ಇದೀಗ ಚೇತರಿಸಿಕೊಂಡ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಭಾನುವಾರ ಅಹಮ್ಮದಾಬಾದ್ ನಲ್ಲಿ ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ಆಡಲಿದೆ. ಈ ಪಂದ್ಯದ ವೇಳೆಗೆ ಶಾರುಖ್ ಖಾನ್ ಅಹಮ್ಮದಾಬಾದ್ ಮೈದಾನದಲ್ಲಿರಲಿದ್ದಾರೆ. ಸದ್ಯಕ್ಕೆ ಅವರು ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ.