ಮುಂಬೈ: ಲೀಲಾವತಿ ಆಸ್ಪತ್ರೆಯಿಂದ ಕೆಲವು ಗಂಟೆಗಳ ಹಿಂದೆ ಡಿಸ್ಚಾರ್ಜ್ ಆದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಬಾಂದ್ರಾದಲ್ಲಿನ ತಮ್ಮ ನಿವಾಸಕ್ಕೆ ವಾಪಾಸ್ಸಾದರು. ಈ ವೇಳೆ ಅಲ್ಲಿ ನೆರೆದಿದ್ದ ತಮ್ಮ ಅಭಿಮಾನಿಗಳ ಕಡೆ ನೋಡಿ ನಮಸ್ಕರಿಸಿದರು.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ನಟ ವಿಡಿಯೋ ವೈರಲ್ ಆಗಿದೆ. ಹರಿದಾಡುತ್ತಿರುವ ವಿಡಿಯೋದಲ್ಲಿ ನಟ ಆರಾಮಾಗಿ ನಡೆದುಕೊಂಡು ಬರುತ್ತಿರುವುದನ್ನು ಕಾಣಬಹುದು. ಇನ್ನು ಎಡಗೈಗೆ ಬ್ಯಾಂಡೇಜ್ ಹಾಕಲಾಗಿದೆ.
ಇನ್ನೂ ನಟ ಆಸ್ಪತ್ರೆಯಿಂದ ಡಿಸ್ಚರ್ಜ್ ಆಗುತ್ತಿರುವ ಹಿನ್ನೆಲೆ ಅವರಿಗೆ ಮನೆ ಹಾಗೂ ಆಸ್ಪತ್ರೆ ಸುತ್ತಾಮುತ್ತಾ ಬಿಗಿ ಬಂದೋಬಸ್ತ್ ಅನ್ನು ಮಾಡಲಾಗಿದೆ. ಎಂದಿನಂತೆ ನಟ ಸೈಫ್ ಸ್ಟೈಲಿಶ್ ಆಗಿಯೇ ಕಾಣಿಸಿಕೊಂಡರು. ಜೀನ್ಸ್ ಪ್ಯಾಂಟ್ ಜೊತೆ ಬಿಳಿ ಶರ್ಟ್ ಧರಿಸಿದ್ದರು.
ಜನವರಿ 16 ರಂದು 12 ನೇ ಮಹಡಿಯಲ್ಲಿರುವ ಅವರ ನಿವಾಸ ನುಗ್ಗಿದ್ದ ದರೋಡೆಕೋರ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಗಂಭೀರ ಹಲ್ಲೆ ಮಾಡಿದ್ದ. ಇದೀಗ 6 ದಿನಗಳ ಚಿಕಿತ್ಸೆ ಬಳಿಕ ನಟ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಖಾನ್ ಅವರ ಕೈಗೆ ಎರಡು ಮತ್ತು ಕುತ್ತಿಗೆಯ ಬಲಭಾಗದಲ್ಲಿ ಒಂದು ಸೇರಿದಂತೆ ಮೂರು ಗಾಯಗಳಾಗಿವೆ ಎಂದು ವೈದ್ಯರು ಈ ಹಿಂದೆ ಹೇಳಿದ್ದರು. ಅತ್ಯಂತ ತೀವ್ರವಾದ ಗಾಯವು ಅವನ ಬೆನ್ನುಮೂಳೆಗೆ ಆಗಿತ್ತು. ಬೆನ್ನಿನ ಭಾಗಕ್ಕೆ ಹೊಕ್ಕಿದ್ದ 2.5 ಇಂಚಿನ ಚಾಕುವನ್ನು ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದರು.