ಮುಂಬೈ: ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ನಟರು ರಿಯಲ್ ಲೈಫ್ ನಲ್ಲಿ ಹೀರೋ ಆಗಿರುತ್ತಾರೆ. ಇದಕ್ಕೆ ಕನ್ನಡದ ಹಿರಿಯ ನಟ ವಜ್ರಮುನಿ, ಬಾಲಿವುಡ್ ನ ಸೋನು ಸೂದ್ ಮುಂತಾದವರು ಸಾಕ್ಷಿ.
ಈಗ ಮತ್ತೊಬ್ಬ ವಿಲನ್ ಕಬೀರ್ ದುಹಾನ್ ಸಿಂಗ್ ಬಗ್ಗೆಯೂ ಇಂತಹದ್ದೇ ಸುದ್ದಿ ಕೇಳಿಬಂದಿದೆ. ಕಬೀರ್ ಸಿಂಗ್ ತೆರೆಯ ಮೇಲೆ ಖಡಕ್ ವಿಲನ್ ಆಗಿ ಅಬ್ಬರಿಸುತ್ತಾರೆ. ಹೀರೋ, ಹೀರೋಯಿನ್ ಗೆ ಕಾಟ ಕೊಡುತ್ತಾರೆ, ಕೆಟ್ಟ ಕೆಲಸಗಳನ್ನೆಲ್ಲಾ ಮಾಡುತ್ತಾರೆ.
ಹೀಗಾಗಿ ಅವರನ್ನು ನಿಜ ಜೀವನದಲ್ಲಿ ನೋಡಿದರೂ ಒಮ್ಮೆ ಜನ ಅದೇ ಇಮೇಜ್ ನಿಂದ ನೋಡುವುದು ಸಾಮಾನ್ಯ. ಆದರೆ ರಿಯಲ್ ಲೈಫ್ ನಲ್ಲಿ ಕಬೀರ್ ಸಿಂಗ್ ಮಾಡುವ ಕೆಲಸದ ಬಗ್ಗೆ ತಿಳಿದರೆ ನಿಜಕ್ಕೂ ಅವರ ಬಗ್ಗೆ ಹೆಮ್ಮೆಯಾಗುತ್ತದೆ.
ಕಬೀರ್ ಸಿಂಗ್ ತಮಗೆ ಯಾವುದೇ ಸಿನಿಮಾ ಆಫರ್ ಬಂದು ಅಡ್ವಾನ್ಸ್ ಪಡೆದುಕೊಂಡಾಗಲೂ ಅದನ್ನು ಕೇವಲ ತನಗಾಗಿ ಮಾತ್ರ ಖರ್ಚು ಮಾಡಲ್ಲ. ಅಡ್ವಾನ್ಸ್ ಹಣ ಬಂದ ತಕ್ಷಣ ಅದರಿಂದ ಸ್ವಲ್ಪ ಹಣವನ್ನು ಬಡವರಿಗೆ ಊಟ ಹಾಕಲು ಬಳಸುತ್ತಾರಂತೆ.
ಹಣ ಬಂದ ಮರುದಿನವೇ ಬಡ ಮಕ್ಕಳು, ಅನಾಥಾಶ್ರಮ ಯಾವುದಕ್ಕಾದರೂ ಊಟ ನೀಡಲು ಬಳಸುತ್ತಾರೆ. ಆ ಮೂಲಕ ತಮ್ಮ ದುಡಿಮೆಯಿಂದ ಯಾರೋ ಬಡವರ ಹೊಟ್ಟೆ ತುಂಬಿಸುತ್ತಾರೆ. ಅದೂ ತಾವೇ ಹೋಗಿ ಊಟ ಬಡಿಸಿ ಬರುತ್ತಾರೆ. ತೆರೆ ಮೇಲೆ ವಿಲನ್ ಆಗಿದ್ದರೂ ನಿಜ ಜೀವನದಲ್ಲಿ ಅವರು ಮಾಡುವ ಕೆಲಸ ಹೀರೋಗಳಂತಿದೆ ಎನ್ನುವುದು ಗಮನಾರ್ಹ.