Publish Date: Tue, 13 Jun 2017 (09:15 IST)
Updated Date: Tue, 13 Jun 2017 (09:16 IST)
ಹೈದರಾಬಾದ್: ಬಾಹುಬಲಿ ಸಿನಿಮಾ ಹಿಟ್ ಆಗುವುದರೊಂದಿಗೆ ತೆಲುಗು ಸಿನಿಮಾಗೆ ಮಾತ್ರ ಸೀಮಿತವಾಗಿದ್ದ ನಟ ಪ್ರಭಾಸ್ ದೇಶಾದ್ಯಂತ ಮನೆ ಮಾತಾದರು. ಅವರೀಗ ಬಾಲಿವುಡ್ ಮಂದಿಗೂ ಪ್ರಿಯರಾಗಿದ್ದಾರೆ.
ಅಂತಿಪ್ಪ ಪ್ರಭಾಸ್ ಬಾಲಿವುಡ್ ಎಂಟ್ರಿ ಬಗ್ಗೆ ಅಲ್ಲಿ ಇಲ್ಲಿ ಸುದ್ದಿ ಕೇಳಿ ಬರುತ್ತಲೇ ಇದೆ. ಹಾಗಿರುವಾಗ ಸಲ್ಮಾನ್ ಖಾನ್ ಜತೆ ನಟಿಸುತ್ತಾರೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ. ಹಾಗಂತ ಮಾಧ್ಯಮವೊಂದು ವರದಿ ಮಾಡಿದೆ.
ಆಕ್ಷನ್ ಚಿತ್ರಗಳ ನಿರ್ದೇಶಕ ರೋಹಿತ್ ಶೆಟ್ಟಿ ಈ ಇಬ್ಬರೂ ದೈತ್ಯರನ್ನು ಜತೆಯಾಗಿ ತೆರೆ ಮೇಲೆ ತರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಆದರೆ ಅದಿನ್ನೂ ಪಕ್ಕಾ ಆಗಿಲ್ಲ. ಒಂದು ವೇಳೆ ಈ ಇಬ್ಬರೂ ಸೂಪರ್ ಸ್ಟಾರ್ ಗಳು ಜತೆಯಾದರೆ ಅಭಿಮಾನಿಗಳಿಗೆ ಹಬ್ಬವಾಗುವುದರಲ್ಲಿ ಸಂಶಯವಿಲ್ಲ.
ಅದರ ಜತೆಗೆ ಬಾಹುಬಲಿ ಹಿಂದಿ ಅವತರಣಿಕೆಯ ಹಂಚಿಕೆದಾರ ಕರಣ್ ಜೋಹರ್ ಕೂಡಾ ಪ್ರಭಾಸ್ ರನ್ನು ಬಾಲಿವುಡ್ ಗೆ ಪರಿಚಯಿಸಲು ತುದಿಗಾಲಲ್ಲಿ ನಿಂತಿದ್ದಾರಂತೆ. ಆದರೆ ಸದ್ಯಕ್ಕೆ ಪ್ರಭಾಸ್ ತಮ್ಮ ಸಾಹೋ ಚಿತ್ರದಲ್ಲಿ ತಲ್ಲೀನರಾಗಿದ್ದಾರೆ.