Publish Date: Tue, 13 Jun 2017 (08:56 IST)
Updated Date: Tue, 13 Jun 2017 (08:58 IST)
ನವದೆಹಲಿ: ಪ್ರಧಾನಿ ಮೋದಿ ಹಾಗೆಲ್ಲಾ ಸುಮ್ಮನೇ ಒಬ್ಬರನ್ನು ಹೊಗಳುವವರಲ್ಲ. ಆದರೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಅದಕ್ಕೆ ಕಾರಣ ಅಕ್ಷಯ್ ಹೊಸ ಚಿತ್ರ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’!
ಅಕ್ಷಯ್ ಅಭಿನಯದ ಈ ಚಿತ್ರದ ಟ್ರೇಲರ್ ಈಗಾಗಲೇ ಹಿಟ್ ಆಗಿದೆ. ಇದು ಸ್ವಚ್ಛ್ ಭಾರತ ಅಭಿಯಾನವನ್ನು ಆಧಾರವಾಗಿಟ್ಟುಕೊಂಡು ಮಾಡಿದ ಸಿನಿಮಾ. ಹಾಗಾಗಿ ಪ್ರಧಾನಿ ಮೋದಿಗೆ ಇದು ಇಷ್ಟವಾಗಿದೆ.
ಹೀಗಾಗಿ ಸ್ವಚ್ಛ್ ಭಾರತ ಅಭಿಯಾನದಲ್ಲಿ ಅಕ್ಷಯ್ ಪಾತ್ರ ದೊಡ್ಡದು ಎಂದು ಹೊಗಳಿದ್ದಾರೆ. ಟ್ವಿಟರ್ ನಲ್ಲಿ ಪರಸ್ಪರ ತಮ್ಮ ಅಭಿಮಾನ ಹಂಚಿಕೊಂಡಿರುವ ಇಬ್ಬರೂ ಪರಸ್ಪರ ಹೊಗಳಿಕೊಂಡಿದ್ದಾರೆ. ಸ್ವಚ್ಛ್ ಭಾರತ ಅಭಿಯಾನಕ್ಕೆ ನನ್ನದೊಂದು ಚಿಕ್ಕ ಕಾಣಿಕೆ ಎಂದು ಚಿತ್ರದ ಟ್ರೇಲರ್ ನ್ನು ಪ್ರಧಾನಿ ಮೋದಿಗೆ ಅಕ್ಷಯ್ ಕಳುಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ತುಂಬಾ ಚೆನ್ನಾಗಿದೆ. ನಿಮ್ಮೊಂದಿಗೆ ಮುಂದಿನ ದಿನಗಳಲ್ಲೂ ಸ್ವಚ್ಛ್ ಭಾರತ ಅಭಿಯಾನದ ಬಗ್ಗೆ ಜತೆಯಾಗಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.