ಮುಂಬೈ: ಪಾಕಿಸ್ತಾನ ನಟ ನಟಿಸಿ ಚಿತ್ರ ಬಿಡುಗಡೆಯಾಗಲು ಸಾಕಷ್ಟು ಅಡಚಣೆ ಅನುಭವಿಸಿದ್ದ ಏ ದಿಲ್ ಹೇ ಮುಷ್ಕಿಲ್ ಚಿತ್ರ ಮತ್ತೊಂದು ವಿವಾದದಲ್ಲಿ ಸಿಲುಕಿದೆ.
ನಿರ್ಮಾಪಕ ಕರಣ್ ಜೋಹರ್ ಮೇಲೆ ಖ್ಯಾತ ಗಾಯಕ ಮೊಹಮ್ಮದ್ ರಫಿ ಕುಟುಂಬ ಸಿಟ್ಟಿಗೆದ್ದಿದೆ. ಇದಕ್ಕೆಲ್ಲಾ ಕಾರಣ ಒಂದು ಸಂಭಾಷಣೆ. ಚಿತ್ರದಲ್ಲಿ ಬರುವ ಸನ್ನಿವೇಶವೊಂದರಲ್ಲಿ ಅನುಷ್ಕಾ ಶರ್ಮಾ ರಣಬೀರ್ ಕಪೂರ್ ಗೆ “ಮೊಹಮ್ಮದ್ ರಫಿ ಗಾತೇ ನಹೀ ರೋತೇ ಥೇ” (ಮೊಹಮ್ಮದ್ ರಫಿ ಹಾಡುತ್ತಿರಲಿಲ್ಲ, ಅಳುತ್ತಿದ್ದರು) ಎನ್ನುವ ದೃಶ್ಯವಿದೆ.
ಇದು ರಫಿ ಮಗ ಶಹೀದ್ ರಫಿ ಸಿಟ್ಟಿಗೆ ಕಾರಣವಾಗಿದೆ. “ಈ ಸಂಭಾಷಣೆ ಚಿತ್ರಕ್ಕೆ ಯಾವುದೇ ರೀತಿಯಲ್ಲೂ ಅಗತ್ಯವಿರಲಿಲ್ಲ. ಸಂಭಾಷಣೆ ಬರೆದವರಿಗೆ ಮೊಹಮ್ಮದ್ ರಫಿ ಎಂತಹವರೆಂದು ಗೊತ್ತಿರಲೇ ಬೇಕಲ್ಲ. ಅಂದ ಮೇಲೆ ಹೀಗೆಲ್ಲಾ ಸಂಭಾಷಣೆ ಬರೆಯುವ ಮೊದಲು ಅವರು ಯಾಕೆ ಆಲೋಚನೆ ಮಾಡಲಿಲ್ಲ? ಅವರು ನನ್ನ ತಂದೆ ಎನ್ನುವ ಕಾರಣಕ್ಕೆ ಈ ಮಾತು ಹೇಳುತ್ತಿಲ್ಲ. ಅವರು ತೀರಿಕೊಂಡು 36 ವರ್ಷಗಳೇ ಕಳೆದಿವೆ. ಇಂದಿಗೂ ಅವರನ್ನು ಜನ ಆರಾಧಿಸುತ್ತಾರೆ. ಅವರೊಬ್ಬ ಪರಿಶುದ್ಧ ವ್ಯಕ್ತಿ. ಅಂತಹವರ ಬಗ್ಗೆ ಈ ರೀತಿ ಸಂಭಾಷಣೆ ಬರೆದಿರುವುದು ಅಕ್ಷಮ್ಯ” ಎಂದು ಕಿಡಿ ಕಾರಿದ್ದಾರೆ.
ಶಹೀದ್ ಇಷ್ಟಕ್ಕೇ ಸುಮ್ಮನಾಗಿಲ್ಲ. ಈ ಬಗ್ಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಚೇಂಬರ್ ಗೂ ದೂರು ಕೊಡಲು ನಿರ್ಧರಿಸಿದ್ದಾರೆ. ಅಲ್ಲಿಗೆ ಕರಣ್ ಮತ್ತೊಂದು ಸಂಕಟಕ್ಕೆ ಸಿಲುಕುವುದು ಗ್ಯಾರಂಟಿ ಎಂದಾಯ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ