Publish Date: Fri, 09 Oct 2026 (14:23 IST)
Updated Date: Fri, 09 Oct 2026 (14:26 IST)
ನವರಾತ್ರಿಯು ನವದುರ್ಗೆಯರ ಪೂಜೆಗೆ ಮುಡಿಪಾದ ಅತ್ಯಂತ ಪವಿತ್ರವಾದ ಹಬ್ಬವಾಗಿದೆ. ಈ ಒಂಬತ್ತು ದಿನಗಳಲ್ಲಿ ಹೆಚ್ಚಿನ ಭಕ್ತರು ಉಪವಾಸ ವ್ರತ ಆಚರಿಸುತ್ತಾರೆ ಹಾಗೂ ಮಾಂಸಾಹಾರ, ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸುತ್ತಾರೆ. ಆದರೆ ನವರಾತ್ರಿಯ ಸಮಯದಲ್ಲಿ ಮಾಂಸಾಹಾರವನ್ನು ಏಕೆಗೆ ಸೇವಿಸಬಾರದು? ಇದರ ಹಿಂದೆ ಧಾರ್ಮಿಕ ಚೌಕಟ್ಟು ಮಾತ್ರವಿದೆಯೇ ಅಥವಾ ವೈಜ್ಞಾನಿಕ ಕಾರಣಗಳೂ ಇವೆಯೇ ಎಂಬುದರ ವಿವರ ಇಲ್ಲಿದೆ.
ಆಧ್ಯಾತ್ಮಿಕ ಮತ್ತು ಧಾರ್ಮಿಕ ಹಿನ್ನೆಲೆ
ಸನಾತನ ಧರ್ಮದ ಪ್ರಕಾರ ಆಹಾರವನ್ನು ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಎಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಮಾಂಸಾಹಾರ ಹಾಗೂ ಮದ್ಯಪಾನವನ್ನು ತಾಮಸಿಕ ಆಹಾರದ ವರ್ಗಕ್ಕೆ ಸೇರಿಸಲಾಗುತ್ತದೆ. ತಾಮಸಿಕ ಆಹಾರವು ದೇಹದಲ್ಲಿ ಸೋಮಾರಿತ್ವ, ಕೋಪ, ತಮೋಗುಣ ಮತ್ತು ಕಾಮನೆಗಳನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆಯಿದೆ.
ನವರಾತ್ರಿಯ ದಿನಗಳಲ್ಲಿ ಮನುಷ್ಯನು ತನ್ನ ಆಂತರಿಕ ಶುದ್ಧತೆ, ಭಕ್ತಿ ಮತ್ತು ಏಕಾಗ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ತಾಮಸಿಕ ಆಹಾರ ಸೇವನೆಯಿಂದ ಮನಸ್ಸಿನ ಏಕಾಗ್ರತೆ ಭಂಗಗೊಂಡು, ಆರಾಧನೆ ಮತ್ತು ಧ್ಯಾನದಲ್ಲಿ ತೊಡಗಿಸಿಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ, ದೇವಿಯ ಕೃಪೆಗೆ ಪಾತ್ರರಾಗಲು ಹಾಗೂ ಸಾತ್ವಿಕ ಗುಣಗಳನ್ನು ಮೈಗೂಡಿಸಿಕೊಳ್ಳಲು ಮಾಂಸಾಹಾರವನ್ನು ತ್ಯಜಿಸಲಾಗುತ್ತದೆ.
ವೈಜ್ಞಾನಿಕ ಕಾರಣ
ನವರಾತ್ರಿಯು ವರ್ಷದಲ್ಲಿ ಎರಡು ಪ್ರಮುಖ ಖಋತು ಬದಲಾವಣೆಯ ಸಂದರ್ಭಗಳಲ್ಲಿ ಬರುತ್ತದೆ — ವಸಂತ ನವರಾತ್ರಿ (ಮಾಚ್-ಏಪ್ರಿಲ್) ಮತ್ತು ಶರದ್ ನವರಾತ್ರಿ (ಸೆಪ್ಟೆಂಬರ್-ಅಕ್ಟೋಬರ್). ಖಋತುಗಳು ಬದಲಾಗುವ ಈ ಸಂಕ್ರಮಣದ ಅವಧಿಯಲ್ಲಿ ಮಾನವ ದೇಹದ ರೋಗನಿರೋಧಕ ಶಕ್ತಿ ಸ್ವಾಭಾವಿಕವಾಗಿ ಕೊಂಚ ಕುಸಿಯುತ್ತದೆ.
ಮಾಂಸಾಹಾರವು ಜೀರ್ಣವಾಗಲು ಸುಲಭವಲ್ಲ ಹಾಗೂ ಜೀರ್ಣಾಂಗವ್ಯೂಹದ ಮೇಲೆ ಹೆಚ್ಚಿನ ಒತ್ತಡ ಹೇರುತ್ತದೆ. ವಾತಾವರಣ ಬದಲಾಗುವ ಈ ಸಮಯದಲ್ಲಿ ಭಾರಿ ಪ್ರಮಾಣದ ತಾಮಸಿಕ ಅಥವಾ ಮಾಂಸದ ಅಡುಗೆಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಮಂದಗೊಂಡು, ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಮತ್ತು ಸೋಂಕುಗಳು ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ದೇಹವನ್ನು ಒಳಗಿನಿಂದ ಸ್ವಚ್ಛಗೊಳಿಸಲು ಮತ್ತು ಜೀರ್ಣಾಂಗಗಳಿಗೆ ವಿಶ್ರಾಂತಿ ನೀಡಲು ಸಾತ್ವಿಕ ಆಹಾರ ಸೇವನೆಯನ್ನು ಶಿಫಾರಸು ಮಾಡಲಾಗುತ್ತದೆ.
ವಿವಿಧ ಸಂಪ್ರದಾಯಗಳಲ್ಲಿ ವೈವಿಧ್ಯತೆ
ಭಾರತದ ಬಹುತೇಕ ಭಾಗಗಳಲ್ಲಿ ನವರಾತ್ರಿಯ ಸಮಯದಲ್ಲಿ ಮಾಂಸಾಹಾರವನ್ನು ವರ್ಜಿಸಿದರೂ, ದೇಶದ ಕೆಲವು ಪ್ರಾದೇಶಿಕ ಸಂಪ್ರದಾಯಗಳಲ್ಲಿ ಭಿನ್ನತೆಯಿದೆ. ಉದಾಹರಣೆಗೆ, ಬಂಗಾಳ, ಅಸ್ಸಾಂ ಹಾಗೂ ಒಡಿಶಾ ಭಾಗಗಳಲ್ಲಿ ಶಾಕ್ತ ಸಂಪ್ರದಾಯದಂತೆ ದೇವಿಗೆ ಬಲಿ ಅರ್ಪಿಸಿ ಪ್ರಸಾದದ ರೂಪದಲ್ಲಿ ಮಾಂಸ ಅಥವಾ ಮೀನನ್ನು ಸೇವಿಸುವ ಪದ್ಧತಿಯೂ ಇದೆ. ಆದರೆ ಸಾಮಾನ್ಯ ಸನಾತನ ಪರಂಪರೆಯಲ್ಲಿ ಶರೀರ ಮತ್ತು ಮನಸ್ಸಿನ ಪವಿತ್ರತೆಗಾಗಿ ಮಾಂಸಾಹಾರದಿಂದ ದೂರವಿರುವುದೇ ಶ್ರೇಷ್ಠ ಎಂದು ಪರಿಗಣಿಸಲಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ