Select Your Language

Notifications

webdunia
webdunia
webdunia
webdunia

ತರಕಾರಿಗಳಿಂದ ಫೇಸ್‌ಪ್ಯಾಕ್!!!!

ತರಕಾರಿಗಳಿಂದ ಫೇಸ್‌ಪ್ಯಾಕ್!!!!
ಬೆಂಗಳೂರು , ಬುಧವಾರ, 10 ಅಕ್ಟೋಬರ್ 2018 (15:19 IST)
ನಮ್ಮ ಪೂರ್ವಜರು ಆರೋಗ್ಯಕ್ಕೆ, ಸೌಂದರ್ಯಕ್ಕೆ ಬಹಳ ಪ್ರಾಮುಖ್ಯತೆಯನ್ನು ಕೊಟ್ಟಿದ್ದರು. ಮನೆಮದ್ದುಗಳಲ್ಲಿ, ಗಿಡಮೂಲಿಕೆಗಳ ಬಳಕೆಯಲ್ಲಿ ಎತ್ತಿದ ಕೈ. ಆದರೆ ಈಗಿನ ವಿದ್ಯಮಾನದಲ್ಲಿ ವಾತಾವರಣದಲ್ಲಾಗುವ ಕಲುಷಿತಗಳಿಂದ, ಹವಾಮಾನ ವೈಪರೀತ್ಯಗಳಿಂದಲೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಂದು ರೀತಿಯ ಸವಾಲೇ ಸರಿ. 
ಅದರಲ್ಲಿಯೂ ಈ ಆಧುನಿಕ ಯುಗದಲ್ಲಿ ಹೆಣ್ಣು ಸ್ವಾವಲಂಬಿಯಾಗಿ ತನ್ನ ದುಡಿತವನ್ನು ಪ್ರಾರಂಭಿಸಿದಾಗಿನಿಂದ ಹೊರಗಿನ ಧೂಳು, ವಾಹನದ ಹೊಗೆ, ಸೆಖೆ, ಬೆವರಿನಿಂದ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟಕರ. ಅದರಲ್ಲಿಯೂ ಇತ್ತೀಚೆಗೆ ನಾನಾ ವಿಧದ ಮೇಕಪ್‌ನಿಂದಾಗಿ ಇನ್ನಷ್ಟು ರಾಸಾಯನಿಕಗಳು ನಮ್ಮ ಹೆಂಗಳೆಯರ ದೇಹವನ್ನು ಪ್ರವೇಶಿಸುತ್ತಿದೆ. ಇಂತಹ ರಾಸಾಯನಿಕಗಳಿಂದ ದೇಹಕ್ಕೆ ಹಾನಿಕಾರವೇ ಹೊರತು ಬೇರೆನಿಲ್ಲ. ಕ್ಷಣ ಮಾತ್ರದ ಸೌಂದರ್ಯಕ್ಕೆ ಮಾರು ಹೋಗುತ್ತಿರುವ ಹೆಂಗಳೆಯರು ಕಲುಷಿತ ಆಹಾರದ ಸೇವನೆಯಿಂದಾಗಿಯೂ ದಿನಂಪ್ರತಿ ಅಲರ್ಜಿಯಂತಹ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ವಾತಾವರಣದ ಧೂಳು ಮತ್ತು ವಾಹನದ ಹೊಗೆ, ಬೆವರಿಗೆ ಮೊದಲು ತುತ್ತಾಗುವುದು ಮುಖ. ಮುಖದ ಸೌಂದರ್ಯವನ್ನು ಹೆಚ್ಚಿಸಲು ಹಲವಾರು ಬ್ಯೂಟಿ ಪಾರ್ಲರ್‌ಗಳು ತಲೆ ಎತ್ತಿವೆ. ಆದರೆ ಕೆಲವು ತರಕಾರಿಗಳನ್ನು, ಅವುಗಳ ಸಿಪ್ಪೆಯನ್ನು ಬಳಸುವುದರಿಂದ ಮನೆಯಲ್ಲಿಯೇ ಸುಲಭವಾಗಿಯೂ, ನೈಸರ್ಗಿಕವಾಗಿಯೂ ಕೆಲವು ಫೇಸ್‌ಪ್ಯಾಕ್‌ಗಳನ್ನು ಮಾಡಿಕೊಳ್ಳಬಹುದು. ಇದರಿಂದ ಯಾವುದೇ ಅಡ್ಡಪರಿಣಾಮಗಳ ಪ್ರಮಾಣ ಕಡಿಮೆ ಎಂದು ಹೇಳಬಹುದು. ಹಾಗಾದರೆ ಯಾವೆಲ್ಲಾ ತರಕಾರಿಗಳಿಂದ ಫೇಸ್‌ಪ್ಯಾಕ್‌ಗಳನ್ನು ಮಾಡಬಹುದು ಎಂದು ನೋಡೋಣ....
 
* ಸೌತೆಕಾಯಿಯ ಫೇಸ್‌ಪ್ಯಾಕ್
    ಮೊದಲು ಮುಖವನ್ನು ಶುದ್ಧ ನೀರಿನಿಂದ ತೊಳೆದುಕೊಳ್ಳಬೇಕು. ನಂತರ ಸೌತೆಕಾಯಿಯನ್ನು ಜಜ್ಜಿ ಚೆನ್ನಾಗಿ ಪೇಸ್ಟ್ ಮಾಡಿಕೊಂಡು ಅದಕ್ಕೆ ಮೊಸರನ್ನು ಬೆರೆಸಿ ಮಿಶ್ರಣ ಮಾಡಬೇಕು. ನಂತರ ತಯಾರಿಸಿದ ಫೇಸ್‌ಪ್ಯಾಕ್ ಅನ್ನು ಮುಖದ ಎಲ್ಲಾ ಭಾಗಗಳಿಗೆ ನಯವಾಗಿ ಹಚ್ಚಬೇಕು. ನಂತರ ಸ್ವಲ್ಪ ಹೊತ್ತು ಒಣಗಲು ಬಿಡಬೇಕು. ಅದು ಪೂರ್ತಿಯಾಗಿ ಒಣಗಿದ ನಂತರ ನಿಧಾನವಾಗಿ ಹಚ್ಚಿರುವ ಪದರವನ್ನು ತೆಗೆಯಬೇಕು. ನಂತರ ಮುಖವನ್ನು ಪನ್ನೀರ ಅಥವಾ ಮಂಜುಗಡ್ಡೆಯಿಂದ ತೊಳೆಯಬೇಕು. 
- ಈ ಫೇಸ್‌ಪ್ಯಾಕ್‌ನಿಂದ ಮುಖದ ಕಾಂತಿ ಇಮ್ಮಡಿಯಾಗುತ್ತದೆ.
 
* ಎಲೆಕೋಸಿನ ಫೇಸ್‌ಪ್ಯಾಕ್
  ಮೊದಲು 2 ರಿಂದ 3 ಎಲೆಕೋಸನ್ನು ರುಬ್ಬಿಕೊಳ್ಳಬೇಕು. ಈ ಪೇಸ್ಟ್‌ಗೆ 1 ಟೇಬಲ್ ಚಮಚ ಸಕ್ಕರೆರಹಿತವಾದ ಗ್ರೀನ್ ಟೀಯನ್ನು ಸೇರಿಸಿ ಅದನ್ನು ಮಿಕ್ಸ್ ಮಾಡಬೇಕು. ನಂತರ ಈ ಮಿಶ್ರಣವನ್ನು ಮುಖಕ್ಕೆ ಮತ್ತು ಕತ್ತಿನ ಭಾಗಕ್ಕೆ ಅನ್ವಯಿಸಬೇಕು. ನಂತರ 10 ರಿಂದ 15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಬೇಕು.
- ಈ ಫೇಸ್‌ಪ್ಯಾಕ್ ಅನ್ನು ತಿಂಗಳಿಗೆ ಒಮ್ಮೆ ಅನ್ವಯಿಸುವುದರಿಂದ ಆಕರ್ಷಕವಾದ ಚರ್ಮವನ್ನು ಪಡೆದುಕೊಳ್ಳಬಹುದು.
 
* ಕ್ಯಾರೆಟ್ ಫೇಸ್‌ಪ್ಯಾಕ್ 
   ಎರಡು ಚಮಚ ಕ್ಯಾರೆಟ್ ರಸಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಬೇಕು. ನಂತರ ಈ ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಅನ್ವಯಿಸಬೇಕು. ನಂತರ 10 ರಿಂದ 15 ನಿಮಿಷದ ಬಳಿಕ ಉಗುರ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಬೇಕು.
- ಈ ಫೇಸ್‌ಪ್ಯಾಕ್ ಅನ್ನು ವಾರಕ್ಕೆ ಒಮ್ಮೆ ಅನ್ವಯಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.
 
* ಬದನೆಕಾಯಿ ಫೇಸ್‌ಪ್ಯಾಕ್
  ಒಂದಿಷ್ಟು ಬದನೆಕಾಯಿಯನ್ನು ತೆಗೆದುಕೊಂಡು ಅದನ್ನು ಚೂರು ಮಾಡಿ ಚಮಚದ ಸಹಾಯದಿಂದ ಅದನ್ನು ಜಜ್ಜಿ ಪೇಸ್ಟ್ ಮಾಡಬೇಕು. ನಂತರ ಬದನೆ ಪೇಸ್ಟ್‌ಗೆ 1 ಟೇಬಲ್ ಚಮಚ ಅಲೋವೆರಾ ಜೆಲ್ ಸೇರಿಸಿ ಮಿಶ್ರಗೊಳಿಸಿ. ನಂತರ ಈ ಮಿಶ್ರಣವನ್ನು ಮುಖಕ್ಕೆ ಮತ್ತು ಕತ್ತಿನ ಭಾಗಕ್ಕೆ ಅನ್ವಯಿಸಿ. 15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.
 
- ಈ ಫೇಸ್‌ಪ್ಯಾಕ್ ಅನ್ನು ತಿಂಗಳಿಗೆ ಎರಡು ಬಾರಿ ಅನ್ವಯಿಸುವುದರಿಂದ ಉತ್ತಮ ಪರಿಣಾಮಗಳನ್ನು ಪಡೆದುಕೊಳ್ಳಬಹುದು. 
 
 ಇಂದಿನ ವಿದ್ಯಮಾನದಲ್ಲಿ ಹೆಂಗಳೆಯರಿಗೆ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಕಷ್ಟದ ಮಾತೇ ಸರಿ. ವಾತಾವರಣದ ಧೂಳು, ವಾಹನದ ಹೊಗೆ, ಕಲುಷಿತ ಗಾಳಿ, ಹೆಚ್ಚು ತೈಲಯುಕ್ತವಾದ ಆಹಾರದ ಬಳಕೆಯಿಂದಾಗಿ ಮುಖದ ಮೇಲೆ ಮೊಡವೆಗಳಾಗುವುದು ಸಹಜ. ಅವು ಮೊದಲು ಸಣ್ಣ ವಿಷಯದಂತೆ ತೋರಿದರೂ ಅವುಗಳಿಂದಾಗುವ ಕಲೆಗಳು ಮುಖದ ಅಂದವನ್ನು ಕಡಿಮೆಗೊಳಿಸುತ್ತದೆ. ಆಗ ರಾಸಾಯನಿಕಯುಕ್ತವಾದ ಕ್ರೀಮ್‌ಗಳನ್ನು ಬಳಸುವುದಕ್ಕಿಂತ ನೈಸರ್ಗಿಕವಾದ ಉತ್ಪನ್ನಗಳನ್ನು ಬಳಸುವುದು ಉತ್ತಮ. ಅದರೆ ಅದಕ್ಕೂ ಮೊದಲು ವೈದ್ಯರ ಸಲಹೆಗಳನ್ನು ತೆಗೆದುಕೊಂಡು ಅವರು ಸೂಚನೆಗಳನ್ನು ಪಾಲಿಸುವುದು ಉತ್ತಮ. ಏಕೆಂದರೆ ನೈಸರ್ಗಿಕವಾಗಿದ್ದರೂ ಕೆಲವೊಂದು ಪದಾರ್ಥಗಳು ಅಲರ್ಜಿಯನ್ನು ಉಂಟುಮಾಡುತ್ತವೆ. ಅದರಲ್ಲಿಯೂ ಮುಖದ ತ್ವಚೆಯು ಸೂಕ್ಷ್ಮವಾಗಿರುವುದರಿಂದ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಯಾವುದೇ ಪ್ರಯೋಗಗಳನ್ನು ಮಾಡುವ ಮೊದಲು ವೈದ್ಯರ ಸಲಹೆಗಳನ್ನು ತೆಗೆದುಕೊಂಡು ಮುಂದುವರೆಯುವುದು ಉತ್ತಮ. 

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳ ಚಿಕನ್ ಫ್ರೈ ರೆಸಿಪಿ