Select Your Language

Notifications

webdunia
webdunia
webdunia
webdunia

ಚಳಿಗಾಲದಲ್ಲಿ ತ್ವಚೆಯನ್ನು ಸುರಕ್ಷಿತವಾಗಿ ಮತ್ತು ಅಂದವಾಗಿ ಇರಿಸಿಕೊಳ್ಳುವುದು ಹೇಗೆ..?

ಚಳಿಗಾಲದಲ್ಲಿ ತ್ವಚೆಯನ್ನು ಸುರಕ್ಷಿತವಾಗಿ ಮತ್ತು ಅಂದವಾಗಿ ಇರಿಸಿಕೊಳ್ಳುವುದು ಹೇಗೆ..?
ಬೆಂಗಳೂರು , ಬುಧವಾರ, 13 ಡಿಸೆಂಬರ್ 2017 (17:24 IST)
ನಾಗಶ್ರೀ ಭಟ್
 
ಚಳಿಗಾಲವು ನಮಗೆ ಇಷ್ಟವಾದರೂ ನಮ್ಮ ತ್ವಚೆಗೆ ಸೂಕ್ತವಾಗಿರುವುದಿಲ್ಲ. ಈ ದಿನಗಳಲ್ಲಿ ನಮ್ಮ ಚರ್ಮದಲ್ಲಿನ ತೇವಾಂಶದ ಪ್ರಮಾಣ ಕಡಿಮೆಯಾಗುವುದರಿಂದ ತ್ವಚೆಯು ಒಣಗುವುದು, ತುರಿಕೆ ಮತ್ತು ಮಂಕಾಗುವುದು ಸರ್ವೇಸಾಮಾನ್ಯವಾಗಿದೆ.
 
ನಾವು ಸಾಮಾನ್ಯವಾಗಿ ಈ ದಿನಗಳಲ್ಲಿ ಕೋಲ್ಡ್ ಕ್ರೀಮ್‌ಗಳು ಮತ್ತು ಬಾಡಿ ಲೋಶನ್‌ಗಳಿಗಾಗಿ ಹುಡುಕುತ್ತೇವೆ. ಮಾರುಕಟ್ಟೆಯಲ್ಲಿ ಅವು ತುಂಬಾ ದುಬಾರಿಯಾಗಿರುವುದರಿಂದ ಅದರ ಬದಲು ನಾವೇ ಮನೆಯಲ್ಲೇ ಕೆಲವೊಂದು ಮನೆ ಮದ್ದುಗಳನ್ನು ಮಾಡಿಕೊಳ್ಳಬಹುದು. ಮನೆಯಲ್ಲಿರುವ ಜೇನು, ಹಾಲು, ಗ್ಲಿಸರಿನ್‌ಗಳನ್ನು ಬಳಸಿ ಸುಂದರ ತ್ವಚೆಯನ್ನು ನಮ್ಮದಾಗಿಸಿಕೊಳ್ಳಬಹುದು.
ಚಳಿಗಾಲಕ್ಕಾಗಿ ನಿಮಗೆ ಕೆಲವೊಂದು ಸಲಹೆಗಳು:
 
* ವಿಟಮಿನ್-A ಮತ್ತು ವಿಟಮಿನ್-E ಅಂಶವು ಹೆಚ್ಚಾಗಿರುವ ಪದಾರ್ಥಗಳಾದ ಪಪ್ಪಾಯ, ಬಾದಾಮಿ, ಕ್ಯಾಪ್ಸಿಕಮ್, ಕ್ಯಾರೆಟ್, ಪಾಲಾಕ್ ಸೊಪ್ಪು, ಮೊಟ್ಟೆ, ಬೆಣ್ಣೆ ಮತ್ತು ಇತ್ಯಾದಿಗಳನ್ನು ನಿಮ್ಮ ಆಹಾರ ಪದ್ದತಿಯಲ್ಲಿ ಸೇರಿಸಿಕೊಳ್ಳಿ.
 
* ದೇಹದಲ್ಲಿರುವ ನೀರಿನ ಅಂಶ ಮುಖದ ಕಾಂತಿಯ ಮೇಲೆ ಪರಿಣಾಮ ಬೀರುವುದರಿಂದ ಹೆಚ್ಚು ಹೆಚ್ಚು ನೀರು ಕುಡಿಯುವುದು ಅತ್ಯವಶ್ಯಕ. ಆದ್ದರಿಂದ ಪ್ರತಿದಿನವೂ ಸಾಕಷ್ಟು ನೀರನ್ನು ಕುಡಿಯಿರಿ.
 
* ಚಳಿಗಾಲಕ್ಕೆ ಅಗತ್ಯವಿರುವ ಆಹಾರ ಕ್ರಮವನ್ನು ಅನುಸರಿಸಿ. ನಿಮ್ಮ ಆಹಾರ ಕ್ರಮದಲ್ಲಿ ಹೆಚ್ಚು ಹೆಚ್ಚು ಎಳನೀರು, ಹಣ್ಣು, ಹಣ್ಣಿನ ರಸ ಮತ್ತು ಹಸಿರು ತರಕಾರಿಗಳಿರುವಂತೆ ನೋಡಿಕೊಳ್ಳಿ.
 
* ಮುಖ, ಕೈ, ಕಾಲು ಮತ್ತು ತುಟಿಗೆ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿ. ಇದು ತ್ವಚೆಯು ಬಿರಿಯುವುದನ್ನು ಅಥವಾ ಒಡೆಯುವುದನ್ನು ತಡೆಯುತ್ತದೆ.
 
* ಚಳಿಗಾಲದಲ್ಲಿ ತುಂಬಾ ಬಿಸಿ ನೀರಿನ ಸ್ನಾನ ಒಳ್ಳೆಯದಲ್ಲ. ಅದು ತ್ವಚೆಯಲ್ಲಿನ ತೇವಾವಂಶವನ್ನು ತೆಗೆಯುವುದರಿಂದ ಒಣ ತ್ವಚೆಗೆ ಕಾರಣವಾಗುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಉಗುರು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡುವುದು ಉತ್ತಮ.
 
* ಸ್ನಾನ ಮಾಡುವ ಮೊದಲು ಸ್ವಲ್ಪ ಸಕ್ಕರೆ ಮತ್ತು ಆಲಿವ್ ಎಣ್ಣೆಯನ್ನು ಬಳಸಿ ಸ್ಕ್ರಬ್ ಮಾಡುವುದು ಉತ್ತಮ. ಇದು ನಿರ್ಜೀವ ಜೀವಕೋಶಗಳನ್ನು ತೆಗೆದುಹಾಕಿ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ ಮತ್ತು ಮೃದುವಾಗಿಸುತ್ತದೆ.
 
* ಚಳಿಗಾಲದಲ್ಲಿ ತುಟಿ ಒಣಗುವುದು ಸರ್ವೇಸಾಮಾನ್ಯವಾದ ಸಮಸ್ಯೆಯಾಗಿದೆ. ಇದನ್ನು ಹೋಗಲಾಡಿಸಲು ತುಟಿಗೆ ದಿನವೂ ತುಪ್ಪ, ಬೆಣ್ಣೆ ಅಥವಾ ಲಿಪ್ ಬಾಂಬ್‌ಗಳನ್ನು ಬಳಸುತ್ತಿರಿ.
 
* ಚಳಿಗಾಲದಲ್ಲಿ ಆದಷ್ಟೂ ಮೈಯನ್ನು ಪೂರ್ತಿಯಾಗಿ ಮುಚ್ಚುವಂತಹ ಬಟ್ಟೆಗಳನ್ನು ಆಯ್ಕೆಮಾಡಿಕೊಳ್ಳಿ. ತ್ವಚೆಯನ್ನು ಚಳಿ ಗಾಳಿಗೆ ಒಡ್ಡಬೇಡಿ.
 
* ಆಲ್ಕೋಹಾಲ್ ಪ್ರಮಾಣ ಹೆಚ್ಚಾಗಿರುವ ಸೌಂದರ್ಯವರ್ಧಕ ಸಾಧನಗಳನ್ನು ಬಳಸದೇ ಇರುವುದು ಉತ್ತಮ. ಚಳಿಗಾಲದಲ್ಲಿ ಕೇಶ ವಿನ್ಯಾಸದ ಸೌಂದರ್ಯ ವರ್ಧಕಗಳನ್ನು ಬಳಸಬೇಡಿ.
 
* ಚಳಿಗಾಲದಲ್ಲಿ ಬೆಣ್ಣೆ, ಗ್ಲಿಸರಿನ್, ಎಣ್ಣೆಯಂತಹ ನೈಸರ್ಗಿಕ ಮಾಯಿಶ್ಚುರೈಸರ್‌ಗಳನ್ನು ಬಳಸಿ.
 
* ಚಳಿಗಾಲದಲ್ಲಿ ಕೂದಲು ಒಣಗುತ್ತದೆ ಮತ್ತು ಇದರಿಂದ ಬಿರುಕುಂಟಾಗಿ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಹಚ್ಚುವುದು ಒಳ್ಳೆಯದು.
 
* ಚಳಿಗಾಲದಲ್ಲಿ ಪಪ್ಪಾಯಿ, ಜೇನು, ಬಾದಾಮಿಯ ಫೇಸ್ ಪ್ಯಾಕ್‌ಗಳನ್ನು ಮಾಡಿಕೊಳ್ಳಿ. ಅದು ನಿಮ್ಮ ಮುಖದ ತ್ವಚೆಯನ್ನು ಮೃದುವಾಗಿಸುತ್ತದೆ ಮತ್ತು ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ.
 
* ಚಳಿಗಾಲದಲ್ಲಿ ವಾರಕ್ಕೊಮ್ಮೆಯಾದರೂ ಎಣ್ಣೆ-ಸ್ನಾನ ಮಾಡಿ. ಇದು ನಿಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.
 
ಹೀಗೆ ಸರಳವಾಗಿ ನೀವು ಮನೆಯಲ್ಲೇ ಅನುಸರಿಸಬಹುದಾದ ಈ ಸಲಹೆಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.             - 

Share this Story:

Follow Webdunia kannada

ಮುಂದಿನ ಸುದ್ದಿ

ದೇಹದ ಸೌಂದರ್ಯಕ್ಕೆ ಸರಳವಾದ ಮನೆಮದ್ದು