ಅಯೋಧ್ಯೆ(ಆ.05): ಶತಮಾನಗಳಿಂದ ಆಯೋಧ್ಯೆ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಲು ಕಾಯುತ್ತಿರುವ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಿದೆ. ರಾಮ ಮಂದಿರ ಕಾಮಗಾರಿ ಭರದಿಂದ ಸಾಗುತ್ತಿದ್ದು, 2023ರ ಡಿಸೆಂಬರ್ ತಿಂಗಳಲ್ಲಿ ರಾಮ ಮಂದಿರ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಪಷ್ಟಪಡಿಸಿದೆ.
ರಾಮ ಮಂದಿರ, ಕಾಂಪ್ಲೆಕ್ಸ್, ಮ್ಯೂಸಿಯಂ ಸೇರಿದಂತೆ ಎಲ್ಲಾ ಕಾಮಗಾರಿಗಳು 2025ಕ್ಕೆ ಪೂರ್ಣಗೊಳ್ಳಲಿದೆ. 2023ರಿಂದ ಸಾರ್ವಜನಿಕರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ಟ್ರಸ್ಟ್ ಹೇಳಿದೆ. 2020ರ ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ಬರೋಬ್ಬರಿ 1,000 ಕೋಟಿ ವೆಚ್ಚದಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ. ಇನ್ನು ಕಾಂಪ್ಲೆಕ್ಸ್ , ವಸ್ತುಸಂಗ್ರಹಾಲಯ ಸೇರಿ ಇತರ ಕಟ್ಟಗಳ ವೆಚ್ಚ 1,000 ಕೋಟಿ ರೂಪಾಯಿ.
ದೇಶವ್ಯಾಪಿ ರಾಮ ಮಂದಿ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲಾಗಿದೆ. ದೇಣಿಗೆ ಮೂಲಕ 3,000 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಇನ್ನುಳಿದ ಹಣದಲ್ಲಿ ಆಯೋಧ್ಯೆಯನ್ನು ದರಶರಥನ ಪಟ್ಟಣವನ್ನಾಗಿ ಪರಿವರ್ತಿಸಿ ಆಧುನೀಕರಣಗೊಳಿಸಲು ಟ್ರಸ್ಟ್ ಮುಂದಾಗಿದೆ.
ಮಂದಿರ ನಿರ್ಮಾಣದಲ್ಲಿ ಉಕ್ಕು ಅಥವಾ ಇಟ್ಟಿಗೆ ಬಳಸುತ್ತಿಲ್ಲ. ಕಲ್ಲಿನ ಕೆತ್ತನೆಗಳಿಂದ ಮಂದಿರ ನಿರ್ಮಾಣವಾಗಲಿದೆ. ಆದರೆ ಆಧುನಿಕ ತಂತ್ರಜ್ಞಾನದ ಮೂಲಕ ಮಂದಿರ ನಿರ್ಮಾಣವಾಗುತ್ತಿದೆ. ಸುಮಾರು ಎರಡೂವರೆ ಏಕರೆ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣವಾಗಲಿದದೆ.
ಇನ್ನು ಪ್ರವಾಹ, ಭೂಕಂಪ ಸೇರಿ ಪ್ರಾಕೃತಿ ವಿಕೋಪಗಳನ್ನು ತಡೆಯಬಲ್ಲ ಶಕ್ತಿ ಈ ಮಂದಿರಕ್ಕಿದೆ. ಸದ್ಯ ಮಂದಿರದ ಅಡಿಪಾಯ ಕಾರ್ಯ ಸಾಗುತ್ತಿದೆ. ತೀವ್ರ ಮಳೆ, ಕೊರೋನಾ ಕಾರಣ ನಿರ್ಮಾಣ ಕೊಂಚ ವಿಳಂಬವಾಗಿತ್ತು. ಇದೀಗ ಮತ್ತೆ ವೇಗ ಪಡೆದುಕೊಂಡಿದೆ.