ಬೆಂಗಳೂರು: ಮಹಾವಿಷ್ಣುವಿನ ದಶ ಅವತಾರಗಳ ಬಗ್ಗೆ ಕೇಳಿದ್ದೇವೆ. ಆದೇ ರೀತಿ ಶಿವನ 19 ಅವತಾರಗಳಿದ್ದು ಅವುಗಳಲ್ಲಿ ಈ 9 ಅವತಾರಗಳು ಮತ್ತು ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳಿ.
ಶರಭ: ಈ ಅವತಾರದಲ್ಲಿ ಶಿವನು ಸಿಂಹದ ದೇಹಭಾಗ, ಪಕ್ಷಿಯ ರೆಕ್ಕೆಗಳು ಮತ್ತು ಪುರುಷರ ಮುಖಭಾವವನ್ನು ಹೊಂದಿದ್ದಾನೆ. ಕೋಪೋದ್ರಿಕ್ತನಾಗಿದ್ದ ನರಸಿಂಹನನ್ನು ಮಣಿಸಲು ಶಿವನು ಈ ಅವತಾರ ಎತ್ತಿದ್ದನು.
ನಂದಿ: ಈ ಅವತಾರದಲ್ಲಿ ನಂದಿಕೇಶ್ವರ ಎಂದೂ ಶಿವನನ್ನು ಕರೆಯಲಾಗುತ್ತದೆ. ನಂದಿಯ ಮುಖ, ಮಾನವನ ದೇಹವುಳ್ಳ ಶಿವನನ್ನು ಕಾಣಬಹುದು.
ಅರ್ಧನಾರೀಶ್ವರ: ಪತ್ನಿಯು ಪತಿಯ ಸಮಾನ ಅರ್ಧ ಎಂದು ಸೂಚಿಸುವ ಅವತಾರ ಇದಾಗಿದೆ. ಇದರಲ್ಲಿ ಅರ್ಧ ಶಿವನನ್ನು ಅರ್ಧ ಪಾರ್ವತಿ ದೇವಿಯನ್ನು ಕಾಣಬಹುದು.
ಭೈರವ: ಶಿವನ ರೌದ್ರ ಅವತಾರಗಳಲ್ಲಿ ಇದು ಒಂದಾಗಿದೆ. ಹುಲಿಯ ಚರ್ಮ ಧರಿಸಿ, ಕೊರಳಿಗೆ ತಲೆಬುರುಡೆಯ ಹಾರ ಧರಿಸಿ ಶಿವನ ಭಯಂಕರ ರೂಪ ನೋಡಬಹುದು.
ಸುರೇಶ್ವರ: ಇದು ಶಿವನ ಸೌಮ್ಯ ರೂಪದ ಅವತಾರವಾಗಿದೆ. ಭಕ್ತರಲ್ಲಿ ಶಾಂತಿ, ಸಮಾಧಾನ ತರುವ ಶಿವನ ರೂಪವಾಗಿದೆ.
ಅಶ್ವತ್ಥಾಮ: ಮಹಾಭಾರತದಲ್ಲಿ ಬರುವ ಅಶ್ವತ್ಥಾಮನು ಶಿವನ ಅವತಾರವೆಂದೇ ಹೇಳಾಗಿದೆ. ಹಿಂದೂ ಪುರಾಣದ ಪ್ರಕಾರ ಅವನು ಏಳು ಚಿರಂಜೀವಿಗಳಲ್ಲಿ ಒಬ್ಬನು.
ದುರ್ವಾಸ: ಮಹಾಮುನಿ ದುರ್ವಾಸರು ಶಿವನ ಅವತಾರವೆಂದೇ ಹೇಳಲಾಗಿದೆ. ಮಹಾ ತಪಸ್ವಿಗಳು, ಅಷ್ಟೇ ಕೋಪಿಷ್ಠರೂ ಹೌದು.
ವೀರಭದ್ರ: ಹೆಸರೇ ಹೇಳುವಂತೆ ವೀರ, ಶೌರ್ಯದ ಸಂಕೇತವಾದ ಶಿವನ ಅವತಾರವಾಗಿದೆ. ಪತ್ನಿ ಸತಿ ದೇವಿಯು ದಕ್ಷನಿಂದ ಅವಮಾನಿತಳಾಗಿ ಬೆಂಕಿಗೆ ಆಹುತಿಯಾದಾಗ ಕೋಪಗೊಂಡ ಶಿವನು ವೀರಭದ್ರನ ಅವತಾರ ತಾಳಿದ.
ಪಿಪ್ಲಾದ: ಶಿವನ 19 ಅವತಾರಗಳಲ್ಲಿ ಪಿಪ್ಲಾದ ಮೊದಲನೆಯ ಅವತಾರ ಎನ್ನಲಾಗಿದೆ. ಶಿವನ ಈ ಅವತಾರವನ್ನು ಪೂಜೆ ಮಾಡುವುದರಿಂದ ಶನಿ ದೋಷಗಳು ಪರಿಹಾರವಾಗುವುದೆಂದು ನಂಬಲಾಗಿದೆ.