ಬೆಂಗಳೂರು: ಶನಿವಾರ ಶನೇಶ್ವರನನ್ನು ಪೂಜಿಸುವ ವಾರವಾಗಿದ್ದು, ಇಂದು ಶನೇಶ್ವರನನ್ನು ಯಾವ ಹೂವಿನಿಂದ ಪೂಜಿಸಿದರೆ ಅವನ ವಕ್ರದೃಷ್ಟಿಯಿಂದ ಪಾರಾಗಬಹುದು ಎಂದು ನೋಡೋಣ.
ಶನೇಶ್ವರನಿಗೆ ಪ್ರಿಯವಾದ ಬಣ್ಣ ಕಪ್ಪು ಮತ್ತು ಆತನ ವಾಹನ ಕಾಗೆ. ಶನಿ ಪೂಜೆಗೆ ಎಳ್ಳೆಣ್ಣೆ ಅರ್ಪಿಸಬೇಕು ಎಂದು ಕೇಳಿದ್ದೇವೆ. ಅದೇ ರೀತಿ ಖಗಗಳಿಗೆ ಧಾನ್ಯ ಆಹಾರವಾಗಿ ನೀಡುವುದರಿಂದ ಶನೇಶ್ವರನ ಕೆಟ್ಟ ದೃಷ್ಟಿ ತಕ್ಕಮಟ್ಟಿಗೆ ಪರಿಹಾರವಾಗುತ್ತದೆ ಎಂಬುದು ನಮಗೆಲ್ಲರಿಗೂ ಗೊತ್ತು.
ಆದರೆ ಸಾಮಾನ್ಯವಾಗಿ ಶನೇಶ್ವರನಿಗೆ ಯಾವ ಹೂ ಇಷ್ಟ ಎಂಬುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಯಾಕೆಂದರೆ ಮಹಾವಿಷ್ಣುವಿನಂತೆ ಶನೇಶ್ವರ ಅಲಂಕಾರ ಪ್ರಿಯನಲ್ಲ. ಹಾಗಿದ್ದರೂ ನೀಲಿ ಬಣ್ಣದ ಈ ಒಂದು ಹೂವನ್ನು ಅರ್ಪಿಸಿ ಶನಿವಾರಗಳಂದು ಶನೇಶ್ವರನ ಪೂಜೆ ಮಾಡುವುದರಿಂದ ಶನಿದೋಷ ಪ್ರಭಾವ ಕಡಿಮೆಯಾಗುತ್ತದೆ.
ಬಳ್ಳಿಯಲ್ಲಿ ಅರಳುವ ನೀಲಿ ಬಣ್ಣದ ಶಂಖಪುಷ್ಪಗಳೆಂದರೆ ಶನೇಶ್ವರನಿಗೆ ಪ್ರಿಯವಾದ ಹೂವು. ಯಾವುದೇ ನೀಲಿ ಬಣ್ಣದ ಹೂವಿನಿಂದ ಅವನನ್ನು ಪೂಜಿಸಬಹುದು. ಅದರಲ್ಲೂ ವಿಶೇಷವಾಗಿ ಔಷಧೀಯ ಗುಣಗಳನ್ನು ಹೊಂದಿರುವ ಶಂಖ ಪುಷ್ಪದಿಂದ ಪೂಜೆ ಮಾಡುವುದರಿಂದ ಅವನು ಸಂಪ್ರೀತನಾಗುತ್ತಾನೆ ಎಂಬ ನಂಬಿಕೆಯಿದೆ.