ಬೆಂಗಳೂರು: ನಮ್ಮ ಹಿರಿಯರು, ಶಾಸ್ತ್ರಗಳಲ್ಲಿ ಹೇಳುವಂತೆ ಕೆಲವೊಂದು ಕೆಲಸಗಳನ್ನು ಮುಸ್ಸಂಜೆ ಹೊತ್ತು ಮಾಡುವುದು ಅಷ್ಟು ಶುಭಕರವಲ್ಲ. ಇದರಿಂದ ದಾರಿದ್ರ್ಯ ಬರಬಹುದು. ಆ ಕೆಲಸಗಳು ಯಾವುವು ನೋಡೋಣ.
ಸಂಜೆ ಹೊತ್ತು ಹಣ ಕೊಡಬೇಡಿ
ಸಂಜೆ ಹೊತ್ತಿಗೆ ಯಾರೋ ನಿಮ್ಮ ಬಳಿ ಸಾಲ ಅಥವಾ ದಾನವಾಗಿ ಹಣ ಕೊಡಿ ಎಂದು ಕೇಳಲು ಬಂದರೆ ಕೊಡಬೇಡಿ. ಈ ಹೊತ್ತಿನಲ್ಲಿ ಹಣ ಕೊಡುವುದರಿಂದ ನಿಮಗೆ ದಾರಿದ್ರ್ಯ ಬರುವ ಸಂಭವವಿರುತ್ತದೆ. ಸಂಜೆ ಹೊತ್ತು ಲಕ್ಷ್ಮೀ ಬರುವ ಸಮಯ. ಈ ಸಮಯದಲ್ಲಿ ಹಣ ಕೊಡುವುದು ಎಂದರೆ ಸಂಪತ್ತನ್ನು ಹೊರಗೆ ಹಾಕಿದಂತೆ.
ಹಾಲು, ಹಾಲಿನ ಉತ್ಪನ್ನ
ಸಂಜೆ ಹೊತ್ತಿಗೆ ಹಾಲು ಅಥವಾ ಹಾಲಿನ ಉತ್ಪನ್ನವನ್ನು ಯಾರೋ ಕೇಳಿದರೆಂದು ಕೊಡಲು ಹೋಗಬೇಡಿ. ಇವೆರಡೂ ಸಮೃದ್ಧಿಯ ಸಂಕೇತ. ಸಂಜೆ ಹೊತ್ತಿಗೆ ಇವನ್ನು ಕೊಟ್ಟರೆ ನಿಮ್ಮ ಸಮೃದ್ಧಿಯನ್ನೇ ದಾನ ಮಾಡಿದಂತೆ. ಇದರಿಂದ ದಾರಿದ್ರ್ಯ ಉಂಟಾಗಬಹುದಾಗಿದೆ.
ಸಂಜೆ ಹೊತ್ತಿಗೆ ತುಳಸಿ ಕೊಯ್ಯಬೇಡಿ
ಸಂಜೆ ಹೊತ್ತಿಗೆ ತುಳಸಿ ಕೊಯ್ಯುವುದಿರಲಿ, ಮುಟ್ಟಲೂ ಹೋಗಬೇಡಿ. ಈ ಹೊತ್ತಿನಲ್ಲಿ ತುಳಸಿ ಮುಟ್ಟಲು ಹೋದರೆ ಋಣಾತ್ಮಕ ಶಕ್ತಿ ಹೆಚ್ಚಬಹುದು. ಮನೆಯಲ್ಲಿ ಸಮೃದ್ಧಿ ನಾಶವಾಗಬಹುದು. ಅದರ ಬದಲು ಈ ಹೊತ್ತಿನಲ್ಲಿ ತುಳಸಿಗೆ ದೀಪವಿಟ್ಟು ವಂದಿಸಿದರೆ ಸಮೃದ್ಧಿ ಉಂಟಾಗುತ್ತದೆ.