ಬೆಂಗಳೂರು: ಸಾಮಾನ್ಯವಾಗಿ ಕಾಗೆ ಕೂಗಿದರೆ ನೆಂಟರು ಬರುತ್ತಾರೆ ಎಂದು ಹೇಳುವ ರೂಢಿಯಿದೆ. ಆದರೆ ಕಾಗೆ ವಿವಿಧ ರೀತಿಯಲ್ಲಿ ಕೂಗುವುದಕ್ಕೆ ಅಥವಾ ಹಾರುವುದಕ್ಕೆ ಒಂದೊಂದು ಅರ್ಥವನ್ನು ನಮ್ಮ ಶಾಸ್ತ್ರದಲ್ಲಿ ಹೇಳಲಾಗಿದೆ.
ನಾವು ಮನೆಯಿಂದ ಹೊರಗೆ ಹೋಗಲು ಕಾಲಿಡುವ ಸಂದರ್ಭದಲ್ಲಿ ತಲೆಯ ಮೇಲಿನಿಂದ ಕೂಗುತ್ತಾ ಹಾರಿ ಹೋದರೆ ಆರ್ಥಿಕವಾಗಿ ನಷ್ಟ ಎದುರಾಗಬಹುದು ಎಂಬುದರ ಸೂಚನೆಯಾಗಿದೆ. ಅಂದು ನೀವು ಯಾವ ಕೆಲಸ ಮಾಡಲು ಹೊರಟಿರುತ್ತೀರೋ ಆ ಕೆಲಸದಲ್ಲಿ ಸಾಮಾನ್ಯ ಯಶಸ್ಸಷ್ಟೇ ಸಿಗಬಹುದು.
ಒಂದು ವೇಳೆ ನೀವು ಹೊರಡುವ ವೇಳೆಗೆ ನಿಮ್ಮ ಕಣ್ಣೆದುರೇ ಕೂಗುತ್ತಾ ಬಲಭಾಗದಿಂದ ಎಡಭಾಗಕ್ಕೆ ಕಾಗೆ ಹಾರಿದರೆ ಆರ್ಥಿಕ ಲಾಭ ಪಡೆಯಲಿದ್ದೀರಿ ಎಂದರ್ಥ. ಆದರೆ ಎಡದಿಂದ ಬಲಕ್ಕೆ ಹಾರಿದರೆ ಆರ್ಥಿಕ ನಷ್ಟ ಎಂದು ಅರ್ಥೈಸಬಹುದಾಗಿದೆ. ಕಾಗೆಯು ಒಂಟಿ ಕಾಲಿನಲ್ಲಿ ಆಕಾಶಕ್ಕೆ ಮುಖ ಮಾಡಿ ಕರ್ಕಶವಾಗಿ ಕೂತು ಧ್ವನಿ ಮಾಡುತ್ತಿದ್ದರೆ ಯಾವುದೋ ಸಾವಿನ ಸುದ್ದಿ ಕೇಳಿಬರಲಿದೆ ಎಂದರ್ಥ.
ಹಾಗೆಯೇ ಕಾಗೆಯೊಂದು ನೀವು ಮನೆಯಿಂದ ಹೊರಡುವ ಸಮಯಕ್ಕೆ ಶಾಂತವಾಗಿ ಕೂತಿರುವುದನ್ನು ನೋಡಿದರೆ ಆರ್ಥಿಕವಾಗಿ ಲಾಭ ಪಡೆಯಲಿದ್ದೀರಿ ಎಂದರ್ಥವಾಗಿದೆ. ನಿಮ್ಮ ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿದೆ ಎಂದರ್ಥ. ಕಾಗೆಯು ಪದೇ ಪದೇ ತನ್ನ ಬಳಗದವರನ್ನು ಕರೆಯುವಂತೆ ಕೂಗುತ್ತಿದ್ದರೆ ಮನೆಗೆ ನೆಂಟರಿಷ್ಟರು ಬರಲಿದ್ದಾರೆ ಎಂದು ಅರ್ಥೈಸಬಹುದಾಗಿದೆ.