ಯುಎಸ್ ಫೈನಲ್‌ಗಾಗಿ ಫೆಡರರ್ - ಜೊಕೊವಿಕ್ ಹೋರಾಟ
ನ್ಯೂಯಾರ್ಕ್ , ಗುರುವಾರ, 10 ಸೆಪ್ಟಂಬರ್ 2009 (12:14 IST)
ವಿಶ್ವ ನಂ.1 ಆಟಗಾರ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಮತ್ತು ನಾಲ್ಕನೇ ಶ್ರೇಯಾಂಕಿತ ಸೆರ್ಬಿಯಾದ ನೊವಾಕ್ ಜೊಕೊವಿಕ್ ಇಲ್ಲಿ ನಡೆಯುತ್ತಿರುವ ಅಮೆರಿಕನ್ ಓಪನ್ ಟೆನಿಸ್ ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದು, ಪರಸ್ಪರ ಫೈನಲ್ ಸ್ಥಾನಕ್ಕಾಗಿ ಹೋರಾಡಲಿದ್ದಾರೆ. ದಾಖಲೆಯ 22ನೇ ಬಾರಿಗೆ ಗ್ರಾಂಡ್‌ಸ್ಲಾಮ್ ಸೆಮಿಫೈನಲ್ ತಲುಪಿರುವ ಅಗ್ರ ಶ್ರೇಯಾಂಕಿತ ಫೆಡರರ್, ಕ್ವಾರ್ಟರ್ ಹೋರಾಟದಲ್ಲಿ 12ನೇ ಶ್ರೇಯಾಂಕಿತ ಸ್ವೀಡನ್‌ನ ರಾಬಿನ್ ಸೋದರ್ಲಿಂಗ್‌ರನ್ನು 6-0, 6-3, 6-7(6/8), 7-6(8/6)ರ ಅಂತರದಲ್ಲಿ ಮಣಿಸಿದರು. ಮೊದಲೆರಡು ಸೆಟ್‌ಗಳನ್ನು ಸುಲಭವಾಗಿ ವಶಪಡಿಸಿಕೊಂಡ ರೋಜರ್‌ಗೆ ಕೊನೆಯ ಸೆಟ್ ವಶಪಡಿಸಿಕೊಳ್ಳಲು ಹರಸಾಹಸ ಪಡಬೇಕಾಯಿತು. ಟ್ರೈ ಬ್ರೇಕರ್ ಮೂಲಕ ಅವರು ನಿರ್ಣಾಯಕ ಸೆಟ್ ವಶಪಡಿಸಿಕೊಳ್ಳುವ ಮೂಲಕ ಸೆಮಿಗೆ ದಾಪುಗಾಲನ್ನಿಟ್ಟರು.
ಸತತ ಆರನೇ ಬಾರಿಗೆ ಯುಎಸ್ ಕಿರೀಟ ಎದುರು ನೋಡುತ್ತಿರುವ ಹಾಲಿ ಚಾಂಪಿಯನ್ ಫೆಡರರ್, ಫ್ರೆಂಚ್ ಓಪನ್‌ನಲ್ಲಿ ಸೋದರ್ಲಿಂಗ್‌ಗೆ ಸೋಲುಣಿಸಿ ಚೊಚ್ಚಲ ಬಾರಿಗೆ ಕಿರೀಟ ಎತ್ತಿ ಹಿಡಿದಿದ್ದರು.15
ಬಾರಿಯ ಗ್ರಾಂಡ್‌ಸ್ಲಾಮ್ ಚಾಂಪಿಯನ್ ಆದ ಅವರು ಫೈನಲ್‌ಗಾಗಿನ ಹೋರಾಟದಲ್ಲಿ ವಿಶ್ವ ನಂ.4 ಆಟಗಾರ ಸೆರ್ಬಿಯಾದ ಜೊಕೊವಿಕ್‌ರನ್ನು ಎದುರಿಸಲಿದ್ದಾರೆ. ಮತ್ತೊಂದು ಎಂಟರ ಘಟ್ಟದ ಹೋರಾಟದಲ್ಲಿ ಜೊಕೊವಿಕ್, ಹತ್ತನೇ ಶ್ರೇಯಾಂಕಿತ ಸ್ಪೇನ್‌ನ ಫೆರ್ನಾಂಡೊ ವೆರ್ಡಾಸ್ಕೊರನ್ನು 7-6 (7/2), 1-6, 7-5, 6-2 ರ ಅಂತರದಲ್ಲಿ ಹಿಮ್ಮೆಟ್ಟಿಸಿದರು.
ಡಬಲ್ಸ್ ಸೆಮಿಗೆ ವಿಲಿಯಮ್ಸ್ ಸೋದರಿಯರು... ನಾಲ್ಕನೇ ಶ್ರೇಯಾಂಕಿತ ಸೆರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ಮಹಿಳಾ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ವಿಲಿಯಮ್ಸ್ ಸೋದರಿಯರು ಕ್ವಾರ್ಟರ್ ಹಣಾಹಣಿಯಲ್ಲಿ 11ನೇ ಶ್ರೇಯಾಂಕಿತ ಚೀನಾದ ಜತೆಗಾರ್ತಿಯರಾದ ಜಿ ಯಾನ್ ಮತ್ತು ಜೀ ಜೆಂಗ್‌ರನ್ನು 7-5, 6-4ರಲ್ಲಿ ಮಣಿಸಿದರು. ಅದೇ ರೀತಿ ಅಗ್ರ ಶ್ರೇಯಾಂಕಿತ ಜಿಂಬಾಬ್ವೆಯ ಕ್ಲಾರಾ ಬ್ಲೇಕ್ ಮತ್ತು ಅಮೆರಿಕಾದ ಲಿಜೆಲ್ ಹ್ಯೂಬರ್ ಜೋಡಿ ಕೂಡಾ ಮಹಿಳಾ ಡಬಲ್ಸ್ ವಿಭಾಗದಲ್ಲಿ ಸೆಮಿಗೆ ತಲುಪಿದ್ದಾರೆ. ಕ್ಲಾರಾ-ಹ್ಯಾಬರ್ ಜೋಡಿ ಕ್ವಾರ್ಟರ್‌ನಲ್ಲಿ ಆರನೇ ಶ್ರೇಯಾಂಕಿತ ಸ್ಪೇನ್‌ನ ನುರಿಯಾ ಲ್ಲಾಗೊಸ್ಟೇರಾ ವೈವೆರ್ ಮತ್ತು ಮರಿಯಾ ಜೋಸ್ ಮಾರ್ಟಿನೆಜ್ ಸೆಂಚೆಜ್ ಜೋಡಿಯನ್ನು 6-3, 2-6, 7-5ರ ಅಂತರದಲ್ಲಿ ಪರಾಜಯಗೊಳಿಸಿದರು.ಕಾಮೆಂಟ್ ಮಾಡುವ ಮೊದಲು ಇಲ್ಲಿ ಓದಿ.