ಜಪಾನ್ ಓಪನ್ ಟೆನಿಸ್‌ನ ಮಹಿಳಾ ವಿಭಾಗದಲ್ಲಿ ಭಾನುವಾರ, ಡೆನ್ಮಾರ್ಕಿನ ಕಾರೊಲಿನ್ ಒಜ್ನಿಯಾಕಿ ಅವರು ಎಸ್ಟೋನಿಯಾದ ಕೈಯಾ ಕೆನೆಪಿ ಅವರನ್ನು ಮಣಿಸಿ ಸಿಂಗಲ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
18ರ ಹರೆಯದ ಒಜ್ನಿಯಾಕಿ ಕೇವಲ ಎರಡು ಗಂಟೆಗಳ ಆಟದಲ್ಲಿ 6-2, 3-6, 6-1ರ ಅಂತರದಲ್ಲಿ ಕೆನೆಪಿಯವರನ್ನು ಮಣಿಸಿದರು.
"ನನಗೆ ಆಶ್ಚರ್ಯವೆನಿಸುತ್ತಿದೆ. ನಾನು ಇನ್ನೊಂದು ಪಂದ್ಯಾವಳಿಯನ್ನು ಜಯಿಸಿದ್ದೇನೆ. ಈ ವರ್ಷ ನನಗೆ ಅತ್ಯಂತ ಅಮೋಘವಾದುದು. ಜಪಾನ್‌ನಲ್ಲಿ ಇದು ನನಗೆ ದೊರೆತ ಮೊದಲ ಪ್ರಶಸ್ತಿ ಮತ್ತು ನಾನು ಬಹಳ ಸಂತೋಷಗೊಂಡಿದ್ದೇನೆ" ಎಂದು 16ನೇ ರ‌್ಯಾಂಕ್ ಹೊಂದಿರುವ ಒಜ್ನಿಯಾಕಿ ಹೇಳಿದ್ದಾರೆ. ಕೆನಪಿಯವರು 33ನೇ ರ‌್ಯಾಂಕ್ ಹೊಂದಿದ್ದಾರೆ.
ಮೊದಲ ಹಂತದಲ್ಲೆ ಸರ್ವೀಸ್‌ನಲ್ಲಿ ಲಯತಪ್ಪಿದ 23ರ ಕೆನಪಿ ಮೊದಲ ಸೆಟ್‌ನ್ನು 6-2 ಅಂತರದಲ್ಲಿ ಬಿಟ್ಟುಕೊಟ್ಟರು. ಮತ್ತೆ ಎರಡನೇ ಸೆಟ್ ಅನ್ನು ಜಯಿಸಿಕೊಂಡು ಪಂದ್ಯವನ್ನು ಸಮಸ್ಥಿತಿಗೆ ತರುವಲ್ಲಿ ಕೆನಪಿ ಯಶಸ್ವಿಯಾದರಾದರೂ, ಮತ್ತೆ ಮತ್ತೆ ತಪ್ಪೆಸಗುತ್ತಿದ್ದ ಕೆನಪಿಯವರ ಮೇಲೆ ಮೇಲುಗೈ ಸಾಧಿಸುವುದು ಲಯದಲ್ಲಿದ್ದ ಒಜ್ನಿಯಾಕಿಯವರಿಗೆ ತ್ರಾಸದಾಯಕವೆನಿಸಲಿಲ್ಲ.
ಈ ವರ್ಷದ ಮೂರನೇ ಪ್ರಶಸ್ತಿ ಜಯಿಸಿದ ಒಜ್ನಿಯಾಕಿ 8,250 ಡಾಲರ್‌ಗಳನ್ನು ಬಹುಮಾನವಾಗಿ ಪಡೆದರು. ತಮ್ಮ ಎರಡನೇ ಫೈನಲ್ ಆಡಿದ ಕೆನಪಿ 4,350 ಡಾಲರ್ ರನ್ ಅಪ್ ಪ್ರಶಸ್ತಿಗಷ್ಟೇ ತೃಪ್ತರಾಗಬೇಕಾಯಿತು.