Select Your Language

Notifications

webdunia
webdunia
webdunia
webdunia

ಒಲಿಂಪಿಕ್ಸ್: ಭಾರತಕ್ಕೆ ಇದುವರೆಗೆ ದಕ್ಕಿದ್ದು 15 ಪದಕ

ಒಲಿಂಪಿಕ್ಸ್: ಭಾರತಕ್ಕೆ ಇದುವರೆಗೆ ದಕ್ಕಿದ್ದು 15 ಪದಕ
PTI
ಬೀಜಿಂಗ್ ಒಲಿಂಪಿಕ್ಸ್‌ಗೆ ವಿಶ್ವವೇ ಕಣ್ಣುಬಿಟ್ಟು ಕಾತರದಿಂದ ಕಾಯುತ್ತಿದೆ. ಒಂದು ಕಾಲದಲ್ಲಿ ಭಾರತದ ಟ್ರಂಪ್ ಕಾರ್ಡ್ ಎಂದೇ ಖ್ಯಾತಿವೆತ್ತಿದ್ದ ಹಾಕಿ ತಂಡವಿಲ್ಲದೆಯೇ ಭಾರತವು ಈ ಬಾರಿ ಒಲಿಂಪಿಕ್ಸ್‌ಗೆ ತೆರಳಿದೆ. ಭಾರತವು ಹಾಕಿ ಕ್ರೀಡೆಯಲ್ಲಿ ಪರಮೋಚ್ಚ ಸ್ಥಿತಿ ತಲುಪಿದ್ದ ಆ ದಿನಗಳತ್ತ ಒಂದಷ್ಟು ಮೆಲುಕು:

1928 ಮತ್ತು 1980ರ ನಡುವೆ ಪುರುಷರ ಹಾಕಿಗೆ ಸಂಬಂಧಿಸಿ ಭಾರತವು ಒಲಿಂಪಿಕ್ ಕೂಟದಲ್ಲಿ ಅತ್ಯಂತ ಬಲಾಢ್ಯವಾಗಿತ್ತು. ದಾಖಲೆಯ ಎಂಟು ಬಾರಿ ಅದು ಒಲಿಂಪಿಕ್ ಹಾಕಿ ಸ್ವರ್ಣ ಪದಕಗಳನ್ನು ಗೆದ್ದುಕೊಂಡು, ದೇಶದ ರಾಷ್ಟ್ರೀಯಕ್ರೀಡೆಗೆ ಅದರದ್ದೇ ಆದ ಸ್ಥಾನಮಾನ ದೊರಕಿಸಿಕೊಟ್ಟಿತ್ತು.

ವಿಶೇಷವಾಗಿ 1928ರ ಅಮ್‌ಸ್ಟರ್‌ಡ್ಯಾಂ ಮತ್ತು 1956ರ ಮೆಲ್ಬರ್ನ್ ಒಲಿಂಪಿಕ್ಸ್ ಕೂಟಗಳು ಇಲ್ಲಿ ಉಲ್ಲೇಖಾರ್ಹ. ಈ ಸುವರ್ಣ ಯುಗದ ಅವಧಿಯಲ್ಲಿ ನಿರಂತರವಾಗಿ ಅದು 6 ಸ್ವರ್ಣಪದಕಗಳನ್ನು ಗೆದ್ದುಕೊಂಡಿತ್ತಲ್ಲದೆ, 30 ಪಂದ್ಯಗಳಲ್ಲಿ ಅಜೇಯವಾಗುಳಿದಿತ್ತು. ಆದರೆ, 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಸ್ವರ್ಣಪದಕ ಗೆದ್ದುಕೊಂಡಿದ ಬಳಿಕ ಭಾರತೀಯ ಹಾಕಿ ಕ್ರೀಡೆ ಅಧಃಪತನಕ್ಕಿಳಿದಿತ್ತು. 88 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ಪುರುಷರ ಹಾಕಿ ತಂಡವು ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆಯನ್ನೇ ಪಡೆಯಲು ವಿಫಲವಾಗಿದೆ.

ಹಾಕಿ ಕ್ರೀಡೆಯ ಹೊರತಾಗಿ, ಬೇರೆ ವಿಭಾಗಗಳಲ್ಲಿ ಭಾರತದ ಸಾಧನೆ ಅತ್ಯಂತ ಅಪರೂಪ. 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊತ್ತ ಮೊದಲ ಹಾಕಿಯೇತರ ಪದಕ ದೊರಕಿಸಿಕೊಟ್ಟವರು ಫ್ರೀಸ್ಟೈಲ್ ಕುಸ್ತಿಪಟು ಕಶಬಾ ದಾದಾಸಾಹೇಬ್ ಜಾಧವ್. 60 ಕೆ.ಜಿ. ವಿಭಾಗದಲ್ಲಿ ಅವರು ಕಂಚಿನ ಪದಕ ಗೆದ್ದುಕೊಟ್ಟಿದ್ದರು. ಅದಾಗಿ ಮತ್ತೊಂದು ಪದಕ ದೊರೆಯಲು 44 ವರ್ಷ ಕಾಯಬೇಕಾಯಿತು. ಈ ಬಾರಿ ಅಂದರೆ 1996ರಲ್ಲಿ ಅಟ್ಲಾಂಟಾ ಒಲಿಂಪಿಕ್ಸ್ ಕೂಟದಲ್ಲಿ ಭಾರತದ ಲಿಯಾಂಡರ್ ಪೇಸ್ ಪುರುಷರ ಸಿಂಗಲ್ಸ್ ಟೆನಿಸ್ ವಿಭಾಗದಲ್ಲಿ ಭಾರತಕ್ಸೆ ಕಂಚು ತಂದಿತ್ತರು.

2000ದಲ್ಲಿ ಸಿಡ್ನಿಯಲ್ಲಿ ನಡೆದ ಒಲಿಂಪಿಕ್ಸ್ ಕೂಟದಲ್ಲಿ ಭಾರತವು ಮತ್ತೊಂದು ಸಾಧನ ಮಾಡಿತು. ಅಂದರೆ ಒಲಿಂಪಿಕ್ಸ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದವರು ಕರ್ಣಂ ಮಲ್ಲೇಶ್ವರಿ. 69 ಕೆ.ಜಿ. ವಿಭಾಗದಲ್ಲಿ ಆಕೆಯೂ ಕಂಚು ಗೆದ್ದರು. ತೀರಾ ಇತ್ತೀಚೆಗೆ ಭಾರತವು ಪದಕ ಗೆದ್ದದ್ದು ಕಳೆದ ಒಲಿಂಪಿಕ್ಸ್ ಕೂಟದಲ್ಲಿ. ಅಂದರೆ 2004ರಲ್ಲಿ ಅಥೆನ್ಸ್‌ನಲ್ಲಿ ಭಾರತದ ಶೂಟರ್ ರಾಜ್ಯವರ್ಧನ ಸಿಂಗ್ ರಾಥೋರ್ ಅವರು ಬೆಳ್ಳಿ ಪದಕ ಗೆದ್ದು ಭಾರತದ ಗರಿಮೆ ಹೆಚ್ಚಿಸಿದ್ದರು.

ಒಟ್ಟಿನಲ್ಲಿ ಹಾಕಿಯಲ್ಲಿ 8 ಸ್ವರ್ಣ, ಒಂದು ರಜತ ಮತ್ತು 2 ಕಂಚು ಸೇರಿದಂತೆ 11 ಪದಕಗಳು, ಶೂಟಿಂಗ್‌ನಲ್ಲಿ 1 ರಜತ ಪದಕ, ಟೆನಿಸ್, ವೇಟ್‌ಲಿಫ್ಟಿಂಗ್, ಫ್ರೀಸ್ಟೈಲ್ ಕುಸ್ತಿಗಳಲ್ಲಿ ತಲಾ ಒಂದೊಂದು ಕಂಚು- ಹೀಗೆ 15 ಪದಕಗಳನ್ನು ತನ್ನದಾಗಿಸಿಕೊಂಡಿರುವುದು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಇದುವರೆಗಿನ ಸಾಧನೆ.

ಈ ಬಾರಿ ಹಾಕಿ ಇಲ್ಲ, ವೇಟ್ ಲಿಫ್ಟಿಂಗ್‌ಗೆ ಕಳಂಕ ಹಚ್ಚಿಕೊಂಡಿದೆ. ಶೂಟಿಂಗ್, ಟೆನಿಸ್‌ಗಳಲ್ಲಿ ಹೊಸ ಭರವಸೆಗಳಿವೆ. ಈ ಭರವಸೆಗಳ ಕನಸಿನೊಂದಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಬೇಟೆಗೆ ಹೊರಟಿರುವ ಭಾರತ ತಂಡಕ್ಕೆ ಶುಭ ಕೋರೋಣ.

Share this Story:

Follow Webdunia kannada