Select Your Language

Notifications

webdunia
webdunia
webdunia
webdunia

ಧೋನಿ ತಂತ್ರಗಳಿಗೆ ಮಾಜಿಗಳಿಂದ ವ್ಯಾಪಕ ಟೀಕೆ

ಧೋನಿ ತಂತ್ರಗಳಿಗೆ ಮಾಜಿಗಳಿಂದ ವ್ಯಾಪಕ ಟೀಕೆ
ನವದೆಹಲಿ , ಸೋಮವಾರ, 15 ಜೂನ್ 2009 (15:46 IST)
ಕೆಲ ಸಮಯದ ಹಿಂದೆ 'ಕ್ಯಾಪ್ಟನ್ ಕೂಲ್' ಎಂದೇ ಕರೆಸಿಕೊಳ್ಳುತ್ತಿದ್ದ ಮಹೇಂದ್ರ ಸಿಂಗ್ ಧೋನಿ ಸೋಲುಂಡ ಪಂದ್ಯದಲ್ಲಿ ಅನುಸರಿಸಿದ ತಂತ್ರಗಳನ್ನು ಪ್ರಶ್ನಿಸಿರುವ ಮಾಜಿ ಆಟಗಾರರು, ಟ್ವೆಂಟಿ-20 ವಿಶ್ವಕಪ್ ಸೋಲಿಗೆ ತಂತ್ರಗಾರಿಕೆ ಸೇರಿದಂತೆ ಹಲವು ವಿಚಾರಗಳತ್ತ ಬೊಟ್ಟು ಮಾಡಿದ್ದಾರೆ.

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡುವ ಬದಲು ಫೀಲ್ಡಿಂಗ್ ಆಯ್ದುಕೊಂಡದ್ದು, ಯುವರಾಜ್ ಸಿಂಗ್ ಬದಲಿಗೆ ನಾಲ್ಕನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾರನ್ನು ಕಳುಹಿಸಿದ್ದು ಮುಂತಾದ ಕ್ರಮಗಳನ್ನು ಮಾಜಿಗಳು ತೀವ್ರವಾಗಿ ಟೀಕಿಸಿದ್ದಾರೆ.

ಜಡೇಜಾಗಿಂತ ಹರಭಜನ್ ಸಿಂಗ್‌ರನ್ನು ನಾಲ್ಕನೇ ಕ್ರಮಾಂಕದಲ್ಲಿ ಕಳುಹಿಸಬಹುದಿತ್ತು ಎಂದು ತುಲನೆ ಮಾಡಿರುವ ಸ್ಪಿನ್ ದಂತಕತೆ ಇ.ಎ.ಎಸ್. ಪ್ರಸನ್ನ ಪ್ರತಿಕ್ರಿಯಿಸಿದ್ದಾರೆ.

"ಇಂತಹ ನಿರ್ಣಾಯಕ ಪಂದ್ಯಗಳಲ್ಲಿ ಟಾಸ್ ಗೆದ್ದ ನಂತರ ಇಂಗ್ಲೆಂಡನ್ನು ಕಣಕ್ಕಿಳಿಸಿದ್ದೇ ಧೋನಿಯ ಮೊದಲ ತಪ್ಪು. ನಮ್ಮ ಬ್ಯಾಟಿಂಗ್ ಕ್ರಮಾಂಕ ಸರಿಯಿದೆಯಂದು ನನಗನ್ನಿಸುತ್ತಿಲ್ಲ. ಯುವರಾಜ್ ಸಿಂಗ್ ಮತ್ತು ಧೋನಿಗಿಂತ ಮೊದಲು ಜಡೇಜಾರನ್ನು ಕಳುಹಿಸಿದ್ದು ಕೂಡ ಸರಿಯಾದ ನಿರ್ಧಾರವಲ್ಲ. ಅವರ ಬದಲಿಗೆ ಹರಭಜನ್ ಮೇಲೆ ಹೆಚ್ಚಿನ ನಂಬಿಕೆಯಿಡಬಹುದಿತ್ತು" ಎನ್ನುವುದು ಪ್ರಸನ್ನರ ಅಭಿಪ್ರಾಯ.

"ನಮ್ಮಲ್ಲಿ ಸಾಮರ್ಥ್ಯವಿತ್ತು. ಆದರೆ ಒತ್ತಡವನ್ನು ನಿಭಾಯಿಸಲು ಅಸಾಧ್ಯವಾದ ಕಾರಣ ಸೋಲಬೇಕಾಯಿತು" ಎಂದು ಅವರು ತಿಳಿಸಿದ್ದಾರೆ.

ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿಯವರ ಪ್ರಕಾರ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್‌ರನ್ನು ತುಂಬುವ ಆಟಗಾರ ತಂಡದಲ್ಲಿರಲಿಲ್ಲ. ಹಾಗಾಗಿ ಸೋಲುಂಟಾಯಿತು.

"ಈ ಪ್ರಾಕಾರದಲ್ಲಿ ಆರಂಭಿಕ ಜೋಡಿ ಅತ್ಯುತ್ತಮ ಭಾಗೀದಾರಿಕೆ ನೀಡುವ ಅಗತ್ಯವಿದೆ. ಆದರೆ ನಮಗೆ ಹಾಗಾಗಲಿಲ್ಲ. ಇದಲ್ಲದೆ ಜಡೇಜಾ ಮತ್ತು ಗೌತಮ್ ಗಂಭೀರ್ ಬ್ಯಾಟಿಂಗ್ ಮಾಡುತ್ತಿದ್ದಾಗ ರನ್ ರೇಟ್ ತೀರಾ ಕುಸಿದಿತ್ತು" ಎಂದಿದ್ದಾರೆ.

ಮಾಜಿ ಟೆಸ್ಟ್ ಕ್ರಿಕೆಟಿಗ ಅರುಣ್ ಲಾಲ್‌ರವರು ಧೋನಿಯ ನಾಯಕತ್ವವನ್ನೇ ಸೋಲಿಗೆ ಗುರಿ ಮಾಡಿದ್ದಾರೆ. "ಜಡೇಜಾರ ಕ್ರಮಾಂಕವನ್ನು ಏರಿಸಿದ್ದು ಅತಿಯಾದ ಆತ್ಮವಿಶ್ವಾಸದ ಪ್ರತೀಕ" ಎಂದು ಧೋನಿಯನ್ನು ಟೀಕಿಸಿದ್ದಾರೆ.

ಮಾಜಿ ಆಟಗಾರ ವಿ.ಬಿ. ಚಂದ್ರಶೇಖರ್‌ರವರು ಜಡೇಜಾರನ್ನು ತಂಡಕ್ಕೆ ಸೇರಿಸಿಕೊಂಡದ್ದೇ ಮೊದಲ ತಪ್ಪು ಎಂದಿದ್ದಾರೆ.

"ಇಂಗ್ಲೆಂಡನ್ನು ಮೊದಲು ಬ್ಯಾಟಿಂಗ್‌ಗಿಳಿಸಿದ ತಂತ್ರವೇ ಧೋನಿ ಎಸಗಿದ ಆರಂಭಿಕ ಪ್ರಮಾದ. ಜಡೇಜಾರನ್ನು ಪ್ರಗ್ಯಾನ್ ಓಜಾ ಬದಲಿಗೆ ಆರಿಸಿದ್ದು ಎರಡನೇಯದ್ದು. ಅಲ್ಲದೆ ಹರಭಜನ್ ಸಿಂಗ್ ತನ್ನ ಶ್ರೇಷ್ಠ ನಿರ್ವಹಣೆ ನೀಡಿದ್ದಾರೆ ಎಂದೆನಿಸುತ್ತಿಲ್ಲ" ಎಂದು ವಿಸ್ತೃತ ವಿಮರ್ಶೆಗಿಳಿದರು.

"ಈ ಟೂರ್ನಮೆಂಟ್‌ನಲ್ಲೇ ಆಡಿರದ ಜಡೇಜಾರನ್ನು ಯುವರಾಜ್ ಸಿಂಗ್‌ಗಿಂತಲೂ ಮೊದಲು ಕಳುಹಿಸಿದ್ದು ನಿಷ್ಪ್ರಯೋಜಕ ಯತ್ನ. ಅಲ್ಲದೆ ನಾವು ಯುವರಾಜ್ ಮೇಲೆ ಅತಿಯಾದ ಅವಲಂಬನೆ ಹೊಂದಿದ್ದೇವೆ ಎನ್ನಿಸುತ್ತದೆ" ಎಂದರು.

ಅದೇ ಹೊತ್ತಿಗೆ 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ತಂಡದ ಸೋಲಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಅವರು ತಾಯಿ ಇತ್ತೀಚೆಗಷ್ಟೇ ತೀರಿಕೊಂಡಿದ್ದರ ದುಃಖದ ಕಾರಣ ಕ್ರಿಕೆಟ್‌ನಿಂದ ಅವರೀಗ ದೂರ ಉಳಿದಿದ್ದಾರೆ.

"ನಾನೀಗ ಕ್ರಿಕೆಟ್ ವಲಯದಿಂದ ದೂರ ಇದ್ದೇನೆ. ತಾಯಿಯ ಅಗಲಿಕೆಯ ಕಾರಣದಿಂದ ನಾನು ಕ್ರಿಕೆಟನ್ನು ಹಿಂಬಾಲಿಸುತ್ತಿಲ್ಲ. ಹಾಗಾಗಿ ಈ ಹಂತದಲ್ಲಿ ಯಾವುದೇ ಪ್ರತಿಕ್ರಿಯೆಯನ್ನು ನಾನು ನೀಡಲಾರೆ" ಎಂದರು.

ಆದರೆ ಮೊದಲು ಫೀಲ್ಡಿಂಗ್ ಮಾಡುವ ಅವಕಾಶವನ್ನು ಆಯ್ದುಕೊಂಡ ಧೋನಿಯ ನಿರ್ಧಾರದ ಬಗ್ಗೆ ಮದನ್ ಲಾಲ್‌ ಬೆಂಬಲ ವ್ಯಕ್ತಪಡಿಸಿದ್ದಾರೆ. ತಂಡದ ಆಟಗಾರರ ನಡುವೆ ಗೆಲ್ಲಲೇಬೇಕು ಎಂಬ ಉತ್ಕಟ ಮನೋಭಾವವಿರಲಿಲ್ಲ ಎಂಬುದು ಅವರ ಆರೋಪ.

ಮಾಜಿ ಆಯ್ಕೆಗಾರ ಚಂದೂ ಬೋರ್ಡೆ ಕೂಡ ಸೋಲಿಗೆ ಸಂಪೂರ್ಣ ಧೋನಿಯವರನ್ನೇ ಹೊಣೆಗಾರನನ್ನಾಗಿಸುವುದನ್ನು ವಿರೋಧಿಸಿದ್ದಾರೆ.

"ವಾಸ್ತವವಾಗಿ ಹೇಳುವುದಾದರೆ ಟ್ವೆಂಟಿ-20ಯೆನ್ನುವುದು ಅನೂಹ್ಯ ಪ್ರಾಕಾರ. ನಮ್ಮ ತಂಡ ಅತ್ಯುತ್ತಮವಾಗಿ ಕಂಡು ಬಂದಿದ್ದರೂ ದುರದೃಷ್ಟಕರವಾಗಿ ಮಿಂಚಲಿಲ್ಲ. ಇಶಾಂತ್ ತೀರಾ ದುಬಾರಿಯಾದರು. ಆದರೂ ನಾವು ಇಂಗ್ಲೆಂಡನ್ನು 153ಕ್ಕೆ ನಿಯಂತ್ರಿಸಿದೆವು. ಮತ್ತೊಂದು ಹಿನ್ನಡೆಯೆಂದರೆ ನಮ್ಮಲ್ಲಿ ಹೆಚ್ಚಿನ ಸ್ಟ್ರೋಕ್ ಆಟಗಾರರಿರುವುದು" ಎಂದು ವಿಶಾಲ ದೃಷ್ಟಿಯ ಮಾತುಗಳಿಗೆ ಶರಣಾದರು.

Share this Story:

Follow Webdunia kannada