Select Your Language

Notifications

webdunia
webdunia
webdunia
webdunia

ಧೋನಿ ತವರಿನಲ್ಲಿ ಅಭಿಮಾನಿಗಳಿಂದ ಪ್ರತಿಕೃತಿ ದಹನ

ಧೋನಿ ತವರಿನಲ್ಲಿ ಅಭಿಮಾನಿಗಳಿಂದ ಪ್ರತಿಕೃತಿ ದಹನ
ರಾಂಚಿ , ಸೋಮವಾರ, 15 ಜೂನ್ 2009 (13:37 IST)
ವೆಸ್ಟ್‌ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳೆದುರು ಸತತವಾಗಿ ಸೋಲುಂಡ ನಂತರ ಟ್ವೆಂಟಿ-20 ವಿಶ್ವಕಪ್‌ನಿಂದ ಹೊರ ಬಿದ್ದಿರುವ ಟೀಮ್ ಇಂಡಿಯಾ ವಿರುದ್ಧ ತೀವ್ರ ಟೀಕೆಗಳು ಕೇಳಿ ಬರುತ್ತಿದ್ದು, ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ತವರಿನ ಆಟಗಾರ ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಪ್ರತಿಕೃತಿಯನ್ನು ಅಭಿಮಾನಿಗಳು ದಹಿಸಿದ್ದಾರೆ.

ಸುಮಾರು 50ಕ್ಕೂ ಹೆಚ್ಚು ಯುವ ಕ್ರಿಕೆಟ್ ಅಭಿಮಾನಿಗಳು ಸಿದ್ಧೋ ಕಾನ್ಹು ಪಾರ್ಕ್‌ ಎಂಬಲ್ಲಿ ಪ್ರತಿಭಟನೆ ನಡೆಸುತ್ತಾ ಧೋನಿಯವರ ವಿರುದ್ಧ ಘೋಷಣೆಗಳನ್ನು ಕೂಗಿದರು.

ನಂತರ ಧೋನಿಯವರ ಪ್ರತಿಕೃತಿಯನ್ನೂ ದಹಿಸಿದ್ದಲ್ಲದೆ, ಬೈಗುಳಗಳ ಸುರಿಮಳೆಯನ್ನೇ ಸುರಿಸಿದ್ದಾರೆ. "ಟ್ವೆಂಟಿ-20 ವಿಶ್ವಕಪ್‌ನ್ನು ಧೋನಿ ತೀರಾ ಹಗುರವಾಗಿ ಪರಿಗಣಿಸಿದ್ದಾರೆ. ಇದು ಅವರು ಕ್ರಿಕೆಟ್‌ಗಿಂತ ಹೆಚ್ಚಾಗಿ ಗ್ಲಾಮರ್ ಜಗತ್ತಿಗೆ ಆಕರ್ಷಿತರಾಗಿರುವುದನ್ನು ಎತ್ತಿ ತೋರಿಸುತ್ತದೆ" ಎಂದು ಪ್ರತಿಭಟನೆ ನಡೆಸುತ್ತಿದ್ದ ಶ್ಯಾಮ್ ಕುಮಾರ್ ಆರೋಪಿಸಿದರು.

ಮತ್ತೊಬ್ಬ ಆಕ್ರೋಶಿತ ಪ್ರತಿಭಟನಾಕಾರ ರವಿ ಕುಮಾರ್ ಮಾತನಾಡುತ್ತಾ, "ಅವರು ಆಡಿದ ರೀತಿಯಿಂದ ನಮಗೆ ತೀವ್ರ ಆಘಾತವಾಗಿದೆ, ನಿರಾಸೆಯಾಗಿದೆ. ಸೂಪರ್ ಎಂಟಕ್ಕೆ ಪ್ರವೇಶ ಪಡೆದುಕೊಳ್ಳಲು ವಿಫಲವಾದ ಆಸ್ಟ್ರೇಲಿಯಾವನ್ನು ನೋಡಿ ಭಾರತವು ಪಾಠ ಕಲಿಯಬೇಕಿತ್ತು" ಎಂದಿದ್ದಾರೆ.

ಪ್ರತಿಭಟನೆಗಳ ಹಿನ್ನಲೆಯಲ್ಲಿ ನಗರದಾದ್ಯಂತ ಪೊಲೀಸ್ ಪಹರೆ ಹೆಚ್ಚಿಸಲಾಗಿದ್ದು, ಹರ್ಮು ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಧೋನಿಯವರ ಮನೆಗೂ ಭದ್ರತೆ ನೀಡಲಾಗಿದೆ. 2007ರಲ್ಲಿ ಭಾರತ ವಿಶ್ವಕಪ್‌ನಿಂದ ಹೊರ ಬಿದ್ದಾಗ ನಡೆದ ದಾಳಿಯಂತೆ ಈ ಬಾರಿಯೂ ಅಭಿಮಾನಿಗಳು ಕೋಪ ಪ್ರದರ್ಶಿಸುವ ಸಾಧ್ಯತೆಯಿರುವುದರಿಂದ ಈ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

ಎರಡು ವರ್ಷಗಳ ಹಿಂದೆ ಪ್ರತಿಭಟನಾಕಾರರು ಧೋನಿಯವರ ನಿರ್ಮಾಣ ಹಂತದಲ್ಲಿದ್ದ ಮನೆಯ ಕಂಪೌಂಡನ್ನು ಪುಡಿಗೈದಿದ್ದರು. ಆದರೆ ನಂತರ ಭಾರತ ಟ್ವೆಂಟಿ-20 ವಿಶ್ವಕಪ್ ಗೆದ್ದಾಗ ಅದೇ ಅಭಿಮಾನಿಗಳು ಗೋಡೆಯ ಮರು ನಿರ್ಮಾಣ ಮಾಡಿಕೊಟ್ಟಿದ್ದರು.

Share this Story:

Follow Webdunia kannada