Select Your Language

Notifications

webdunia
webdunia
webdunia
webdunia

ಬ್ಯಾಟಿಂಗ್ ವೈಫಲ್ಯ ಸಮರ್ಥನೀಯವಲ್ಲ: ಧೋನಿ ವಿಶ್ಲೇಷಣೆ

ಬ್ಯಾಟಿಂಗ್ ವೈಫಲ್ಯ ಸಮರ್ಥನೀಯವಲ್ಲ: ಧೋನಿ ವಿಶ್ಲೇಷಣೆ
ಲಂಡನ್ , ಸೋಮವಾರ, 15 ಜೂನ್ 2009 (11:32 IST)
ಟ್ವೆಂಟಿ-20 ವಿಶ್ವಕಪ್ ಸೂಪರ್ ಎಂಟರಿಂದಲೇ ವಾಪಸಾಗುವ ಮೂಲಕ ಚಾಂಪಿಯನ್‌ಶಿಪ್‌ ಕಳೆದುಕೊಂಡದ್ದಕ್ಕೆ ತನ್ನ ಬ್ಯಾಟಿಂಗ್ ಸಹ ಆಟಗಾರರನ್ನು ದೂಷಿಸಿರುವ ನಾಯಕ ಮಹೇಂದ್ರ ಸಿಂಗ್ ಧೋನಿ, ಸಾಧಾರಣ ಮೊತ್ತವನ್ನು ಬೆಂಬತ್ತದಿರಲು ನೀಡುವ ಯಾವುದೇ ಕಾರಣಗಳು ಸಮರ್ಥನೀಯವಲ್ಲ ಎಂದಿದ್ದಾರೆ.

ಮಾಡು ಇಲ್ಲವೇ ಮಡಿ ಸೂಪರ್ ಎಂಟರ ಎರಡನೇ ಪಂದ್ಯದಲ್ಲಿ 154ರ ಮೊತ್ತವನ್ನು ಗುರಿಯಾಗಿ ಪಡೆದಿದ್ದ ಭಾರತವು 150ಕ್ಕೆ ಐದು ವಿಕೆಟ್ ಕಳೆದುಕೊಂಡು ಪ್ರಶಸ್ತಿ ಸುತ್ತಿನಿಂದ ಹೊರ ಬಿದ್ದಿದೆ. ಇದಕ್ಕೆ ನಿಸ್ಸಂಶಯವಾಗಿಯೂ ಬ್ಯಾಟ್ಸ್‌ಮನ್‌ಗಳೇ ಕಾರಣ ಎನ್ನುವುದು ಧೋನಿ ಆರೋಪ.

"ನಾವು ಬ್ಯಾಟಿಂಗ್‌ನಲ್ಲಿ ವಿಫಲರಾದೆವು. ಎದುರಾಳಿಗಳು 153 ರನ್ ಗಳಿಸಿದ್ದಾಗ ಆ ಗುರಿಯನ್ನು ತಲುಪಲಾಗದಿದ್ದರೆ ಅದಕ್ಕೆ ಖಂಡಿತಾ ಯಾವುದೇ ಸಮರ್ಥನೆ ತಕ್ಕುದಲ್ಲ. ಅದಕ್ಕೆ ಯಾವುದೇ ವಿವರಣೆಗಳೂ ಕೂಡ ಅನಗತ್ಯ" ಚುಟುಕಾಗಿ ಸೋಲನ್ನು ಟೀಕಿಸಿದರು.

"ನಾವು ಕಳಪೆ ಬ್ಯಾಟಿಂಗ್ ಮಾಡಿದ ಕಾರಣ ಪಂದ್ಯ ಸೋತಿದ್ದೇವೆ. ಆದರೂ ಬೌಲರುಗಳ ನಿರ್ವಹಣೆ ಉತ್ತಮವಾಗಿತ್ತು" ಎಂದು ವಿಶ್ಲೇಷಿಸಿದರು.

ದಾಂಡಿಗರ ಮೇಲಿನ ಟೀಕೆಯನ್ನು ಮುಂದುವರಿಸುತ್ತಾ "ನಾವು ಮಧ್ಯಮ ಕ್ರಮಾಂಕದಲ್ಲಿ ಬಹುತೇಕ ನಷ್ಟ ಅನುಭವಿಸಿದೆವು. ಅವರು ಬೌನ್ಸರುಗಳನ್ನು ಚೆನ್ನಾಗಿ ಉಪಯೋಗಿಸಿದ್ದಾರೆ" ಎಂದ ಧೋನಿಯವರು ಯುವರಾಜ್‌ ಸಿಂಗ್‌ರನ್ನು ಕೆಳ ಕ್ರಮಾಂಕದಲ್ಲಿ ಕಳುಹಿಸಿರುವುದನ್ನು ಸಮರ್ಥಿಸಿಕೊಂಡರು.

ಗಾಯಾಳು ವೀರೇಂದ್ರ ಸೆಹ್ವಾಗ್ ಬದಲಿಗೆ ಆರಂಭಿಕ ಆಟಗಾರ ರೋಹಿತ್ ಶರ್ಮಾ ಸ್ಥಾನವನ್ನು ಭರ್ತಿ ಮಾಡಿದರಾದರೂ ಪೂಲ್ ಹಂತದಲ್ಲಿ ತೋರಿದ್ದ ಪ್ರದರ್ಶನ ಸೂಪರ್ ಎಂಟರಲ್ಲಿ ಬರಲಿಲ್ಲವಲ್ಲ ಎಂಬ ಪ್ರಶ್ನೆಗೆ ಧೋನಿ, "ಸೆಹ್ವಾಗ್‌ರಂತಹ ಆಟಗಾರನನ್ನು ಯಾರೂ ತುಂಬಲು ಸಾಧ್ಯವಿಲ್ಲ. ಖಂಡಿತಾ ನಾವು ಅವರ ಅನುಪಸ್ಥಿತಿಯ ಹಿನ್ನಡೆ ಅನುಭವಿಸಿದ್ದೇವೆ. ಆದರೆ ರೋಹಿತ್ ಕೆಲವು ಪಂದ್ಯಗಳಲ್ಲಿ ನಮಗೆ ಅತ್ಯುತ್ತಮ ಆಟ ನೀಡಿದ್ದಾರೆ. ಆದರೆ ಇಲ್ಲಿ ಸೆಹ್ವಾಗ್ ಇರುತ್ತಿದ್ದರೆ ಬ್ಯಾಟಿಂಗ್ ಕ್ರಮಾಂಕ ಭಿನ್ನವಾಗಿರುತ್ತಿತ್ತು. ಗಾಯಾಳುವಾದ ಕಾರಣ ನಾವು ಏನೂ ಮಾಡುವಂತಿರಲಿಲ್ಲ" ಎಂದರು.

ಎದುರಾಳಿ ತಂಡದ ನಾಯಕ ಪೌಲ್ ಕಾಲಿಂಗ್‌ವುಡ್ ಭಾರತೀಯ ಅಭಿಮಾನಿಗಳನ್ನು ಟೀಕಿಸುತ್ತಾ, "ತವರಿನ ಸಾಕಷ್ಟು ಇಂಗ್ಲೀಷ್ ಬೆಂಬಲಿಗರಿದ್ದಾಗ್ಯೂ ಭಾರತೀಯ ಅಭಿಮಾನಿಗಳು ನಮ್ಮನ್ನು ಅಪಹಾಸ್ಯ ಮಾಡತೊಡಗಿದರು. ಅದು ಅಸಾಧಾರಣ ಮಟ್ಟದಲ್ಲಿತ್ತು. ಇದರಿಂದಾಗಿ ನಾವು ಸ್ಫೂರ್ತಿ ಪಡೆದುಕೊಂಡು ಆಡಿದೆವು. ಅದ್ಭುತ ನಿರ್ವಹಣೆ ನೀಡಿದ್ದೇವೆ. ಸರಿಯಾದ ಜಾಗದಲ್ಲಿ ಬೌಲಿಂಗ್ ಮಾಡುವಲ್ಲಿ ನಾವು ಯಶಸ್ವಿಯಾದೆವು" ಎಂದಿದ್ದಾರೆ.

Share this Story:

Follow Webdunia kannada