Select Your Language

Notifications

webdunia
webdunia
webdunia
webdunia

ಹಾಸ್ಯಾಸ್ಪದ ಬ್ಯಾಟಿಂಗ್‌ನಿಂದಾಗಿ ಸೋಲು: ಬಾಂಗ್ಲಾ ಕೋಚ್

ಹಾಸ್ಯಾಸ್ಪದ ಬ್ಯಾಟಿಂಗ್‌ನಿಂದಾಗಿ ಸೋಲು: ಬಾಂಗ್ಲಾ ಕೋಚ್
ನಾಟಿಂಗ್‌ಹ್ಯಾಮ್ , ಮಂಗಳವಾರ, 9 ಜೂನ್ 2009 (10:52 IST)
ಅವಿವೇಕತನ ಮತ್ತು ಹಾಸ್ಯಾಸ್ಪದ ಬ್ಯಾಟಿಂಗ್‌ನಿಂದಾಗಿ ಬಾಂಗ್ಲಾದೇಶವು ಟ್ವೆಂಟಿ-20 ವಿಶ್ವಕಪ್‌ನಲ್ಲಿ ಐರ್ಲೆಂಡ್ ವಿರುದ್ಧ ಸೋಲುಂಡಿತು ಎಂದು ಆಕ್ರೋಶಗೊಂಡಿರುವ ತರಬೇತುದಾರ ಜೇಮ್ ಸಿಡನ್ಸ್ ಆರೋಪಿಸಿದ್ದಾರೆ.

"ನಮ್ಮ ಯೋಜನೆಗಳಿಗೆ ಅನುಗುಣವಾಗಿ ನಮ್ಮ ಹುಡುಗರು ನಡೆಯುತ್ತಿದ್ದರೆ ಕ್ಷುಲ್ಲಕ 130ರ ಸ್ಕೋರ್‌ಗೆ ಅಂತ್ಯ ಕಾಣುತ್ತಿರಲಿಲ್ಲ" ಎಂದು ಸೋಮವಾರ ಟ್ರೆಂಟ್ ಬ್ರಿಡ್ಜ್‌ನಲ್ಲಿ ಆರು ವಿಕೆಟ್‌ಗಳಿಂದ ಹೀನಾಯವಾಗಿ ಸೋಲುಂಡು ಟೂರ್ನಮೆಂಟ್‌ನಿಂದ ಹೊರ ದಬ್ಬಿಸಿಕೊಂಡ ತಂಡದ ತರಬೇತುದಾರ ತನ್ನ ಅಸಮಾಧಾನ ಹೊರ ಹಾಕಿದರು.

"ನಮ್ಮ ಹುಡುಗರು ತಮ್ಮ ಸ್ವಂತ ಇಚ್ಛೆಯನುಸಾರ ಎಲ್ಲವನ್ನೂ ಮಾಡುತ್ತಾ ಹೋಗುತ್ತಾರೆ ಮತ್ತು ಯಾವುದನ್ನೂ ಕೇಳಿಸಿಕೊಳ್ಳುವುದಿಲ್ಲ. ಅವರು ಕಿವಿಯಾಗಬೇಕಾದ ಅಗತ್ಯ ಹೆಚ್ಚಿದೆ. ಪಂದ್ಯಗಳ ಯೋಜನೆಯಂತೆ ತಂಡದೊಂದಿಗೆ ಅವರು ಸಾಗಬೇಕಾದ ಅನಿವಾರ್ಯತೆಯಿದೆ. ಅವರು ವಿವೇಕರಹಿತರಾಗಿದ್ದರು ಮತ್ತು ಹಾಸ್ಯಾಸ್ಪದ ಬ್ಯಾಟಿಂಗ್‌ಗಿಳಿದರು" ಎಂದು ಆಸ್ಟ್ರೇಲಿಯನ್ ಸೋಲಿನ ವಿಮರ್ಶೆ ಮಾಡಿದ್ದಾರೆ.

"ಶಾಕಿಬ್ ಅಲ್ ಹಸನ್ ಅದೇ ರೀತಿಯ ಹೊಡೆತಗಳಲ್ಲಿ ಔಟಾಗುತ್ತಿರುವುದು ಇದು ಐದನೇ ಬಾರಿ. ಅವರ ಕುಶಲತೆ ಬಗ್ಗೆ ನನಗೆ ಮೆಚ್ಚುಗೆಯಿದೆ. ಇತರರಿಗಿಂತ ಯಾವ ರೀತಿಯಲ್ಲೂ ಅವರು ಕಡಿಮೆಯಲ್ಲ. ಆದರೆ ಈ ಫಲಿತಾಂಶದಿಂದ ನನಗೆ ಅಸಮಾಧಾನವಾಗಿದೆ ಮತ್ತು ಕೋಪಗೊಂಡಿದ್ದೇನೆ. ಅವರಿಗೆ ಏನು ಹೇಳಬೇಕೆಂದೇ ತಿಳಿಯುತ್ತಿಲ್ಲ" ಎಂದರು.

ಬಾಂಗ್ಲಾದೇಶವು 2000ದಲ್ಲಿ ಐಸಿಸಿಯ ಪೂರ್ಣಪ್ರಮಾಣದ ಸದಸ್ಯನಾಗಿತ್ತು. ಅಲ್ಲದೆ ಇತ್ತೀಚಿನ ದಿನಗಳಲ್ಲಿ ತಂಡವು ಸುಧಾರಿತ ಪ್ರದರ್ಶನವನ್ನೂ ನೀಡಿತ್ತು.

"ಮುಂದಿನ ತಿಂಗಳಿನ ವೆಸ್ಟ್‌ಇಂಡೀಸ್ ಪ್ರವಾಸದ ಸಂದರ್ಭದಲ್ಲಿ ನಾವು ಅವರ ಮೇಲೆ ಒತ್ತಡವನ್ನು ಹೇರಬಹುದು ಎಂದು ನಾನು ಈ ಹಿಂದೆ ಯೋಚಿಸಿದ್ದೆ. ಅದಕ್ಕಾಗಿ ನಾವು ಸುಧಾರಿತ ತಂಡವೆಂದು ತೋರಿಸಬೇಕಾದ ಅಗತ್ಯವಿತ್ತು. ಟ್ವೆಂಟಿ-20 ಸಾಕಷ್ಟು ಮೋಜನ್ನು ಒಳಗೊಂಡಿದ್ದರೂ ಸಹ, ಎರಡು ಅಥವಾ ಮೂರು ಕೆಟ್ಟ ಹೊಡೆತಗಳು ಇಡೀ ಪಂದ್ಯವನ್ನು ನಮ್ಮಿಂದ ದೂರ ಕೊಂಡೊಯ್ಯಬಲ್ಲದು" ಎಂದು ಕಳೆದ 20 ತಿಂಗಳುಗಳಿಂದ ಕೋಚ್ ಆಗಿರುವ ಸಿಡನ್ಸ್ ತಿಳಿಸಿದ್ದಾರೆ.

ಹೊಸ ಆಟಗಾರರನ್ನೇ ಹೊಂದಿರುವ ಇದೀಗ ಎರಡನೇ ಸ್ಥಾನದಲ್ಲಿರುವ ಐರ್ಲೆಂಡ್ ಬುಧವಾರ ಹಾಲಿ ಚಾಂಪಿಯನ್ ಟೀಮ್ ಇಂಡಿಯಾವನ್ನು ಎದುರಿಸಲಿದೆ. ಎರಡೂ ತಂಡಗಳು ಸೂಪರ್ ಎಂಟಕ್ಕೆ ಈಗಾಗಲೇ ಅನಧಿಕೃತವಾಗಿ ಪ್ರವೇಶಿಸಿವೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ಸಹಕಾರದ ಕೊರತೆಯಿರುವ ಕಾರಣ ತನ್ನ ತಂಡವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ ಎಂದು ಐರ್ಲೆಂಡ್ ನಾಯಕ ವಿಲಿಯಮ್ ಪೋರ್ಟರ್‌ಫೀಲ್ಡ್ ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada