Select Your Language

Notifications

webdunia
webdunia
webdunia
webdunia

ಟ್ವೆಂಟಿ-20 ಜಾಗತಿಕ ಕ್ರಿಕೆಟ್ ಸಮರಕ್ಕೆ ಕ್ಷಣಗಣನೆ

ಆತಿಥೇಯರಿಗೆ ಮಹತ್ವಾಕಾಂಕ್ಷಿ ನೆದರ್ಲೆಂಡ್ ಸವಾಲು

ಟ್ವೆಂಟಿ-20 ಜಾಗತಿಕ ಕ್ರಿಕೆಟ್ ಸಮರಕ್ಕೆ ಕ್ಷಣಗಣನೆ
ಲಂಡನ್ , ಶುಕ್ರವಾರ, 5 ಜೂನ್ 2009 (13:52 IST)
ಕ್ರಿಕೆಟ್ ಜಗತ್ತಿಗೆ ಪ್ರಪ್ರಥಮ ಬಾರಿಗೆ ಈ ಆಟದ ಅತ್ಯಂತ ಕಿರು ರೂಪವಾದ ಟ್ವೆಂಟಿ-20.ನ್ನು ನೀಡಿದ ಹೆಗ್ಗಳಿಕೆಯುಳ್ಳ ಇಂಗ್ಲೆಂಡಿನಲ್ಲಿ ಐಸಿಸಿ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಕೂಟವು ಶುಕ್ರವಾರ ಅನಾವರಣಗೊಳ್ಳಲಿದ್ದು, ಇದು ನಿರಂತರ 17 ದಿನಗಳ ಕಾಲ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಲಿದೆ.

ಐಸಿಸಿ ಟಿ-20 ವಿಶ್ವಕಪ್‌ನ ಚೊಚ್ಚಲ ಕೂಟದಲ್ಲಿ ಕಪ್ ಗೆದ್ದದ್ದು ಆಕಸ್ಮಿಕವಲ್ಲ, ಅದೃಷ್ಟದಾಟದಿಂದಾಗಿಯೂ ಅಲ್ಲ, ಸ್ವಂತ ಸಾಮರ್ಥ್ಯದಿಂದಲೇ ಎಂಬುದನ್ನು ಮಹೇಂದ್ರ ಸಿಂಗ್ ಧೋನಿ ಬಳಗವು ಜಗತ್ತಿಗೆ ತೋರಿಸಿಕೊಡುವ ಹುಮ್ಮಸ್ಸಿನಲ್ಲಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯಿಂದಾಗಿ ಧೋನಿ ಬಳಗವು ಉತ್ತಮ ಅನುಭವ ಮತ್ತು ಅಭ್ಯಾಸವನ್ನು ತನ್ನದಾಗಿಸಿಕೊಂಡು ಹುರುಪಿನಲ್ಲಿದೆ.

ಇಂಗ್ಲೆಂಡಿನ ಅತ್ಯಂತ ದೊಡ್ಡ ಕ್ರಿಕೆಟ್ ಉತ್ಸವದ ರೂಪ ಪಡೆದುಕೊಂಡಿರುವ ಈ ಟೂರ್ನಿಗೆ ನಾಲ್ಕು ಗುಂಪುಗಳಲ್ಲಿ 12 ರಾಷ್ಟ್ರಗಳು ಸಜ್ಜಾಗಿವೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ನೆದರ್ಲೆಂಡ್ ತಂಡವನ್ನು ಎದುರಿಸಲಿದೆ. ತಂಡದಲ್ಲಿ ಒಂದಿಬ್ಬರು ದಾಂಡಿಗರು ಮತ್ತು ಒಂದಿಬ್ಬರು ಬೌಲರುಗಳು ಮೇಲುಗೈ ಸಾಧಿಸಿಬಿಟ್ಟರೆ, ಪಂದ್ಯ ಗೆದ್ದಂತೆಯೇ ಎಂಬ ಸ್ಥೂಲ ಸೂತ್ರವೊಂದು 20 ಓವರುಗಳ ಪಂದ್ಯಕ್ಕೆ ಅನ್ವಯಿಸುತ್ತದೆ. ಹೀಗಾಗಿ ಯಾವುದೇ ತಂಡವನ್ನು ತೀರಾ ದುರ್ಬಲ ಎಂದು ಕಡೆಗಣಿಸುವಂತೆಯೂ ಇಲ್ಲ. ಮಹತ್ವದ ಓವರುಗಳಲ್ಲಿ ಆಟಗಾರರು ಕೈಕೊಟ್ಟರೆ ಅಥವಾ ಒಂದಿಷ್ಟು ನಿಷ್ಕಾಳಜಿ ತೋರ್ಪಡಿಸಿದರೂ, ಇಡೀ ಪಂದ್ಯವನ್ನೇ ಬಿಟ್ಟುಕೊಡಬೇಕಾದ ಅನಿವಾರ್ಯತೆ ಎದುರಾಗುವ ಆತಂಕ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಇದೆ.

ಉತ್ತಮ ಮತ್ತು ಗಟ್ಟಿಯಾದ ಬ್ಯಾಟಿಂಗ್ ಆರಂಭ, 15ಕ್ಕೇ ಆರಂಭವಾಗುವ ಸ್ಲಾಗ್ ಓವರುಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ರನ್ ಬಾಚಿಕೊಳ್ಳಬಲ್ಲ ಸಾಮರ್ಥ್ಯ, ಒಂದಿಷ್ಟೂ ಮೈಮರೆಯದೆ ನಿಖರ ಬೌಲಿಂಗ್ ಮೂಲಕ, ಒಂದೋ ವಿಕೆಟ್ ಇಲ್ಲವೇ 'ನೋ ರನ್' ಎಂಬ ಸೂತ್ರವನ್ನು ಬೌಲರುಗಳು ಅಳವಡಿಸಿಕೊಂಡಲ್ಲಿ ಪಂದ್ಯ ಗೆದ್ದಂತೆಯೇ.

ಇಂಗ್ಲೆಂಡ್ ತಂಡದಲ್ಲಿ ರವಿ ಬೋಪಾರಾ ಹಾಗೂ ನೆದರ್ಲೆಂಡ್ ತಂಡದಲ್ಲಿ ಡಿರ್ಕ್ ನ್ಯಾನೆಸ್ ಅವರ ಪ್ರದರ್ಶನದ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

ಆತಿಥೇಯ ಇಂಗ್ಲೆಂಡ್ ಮತ್ತು ಮಹತ್ವಾಕಾಂಕ್ಷಿ ನೆದರ್ಲೆಂಡ್ ನಡುವಣ ಪಂದ್ಯವು ಭಾರತೀಯ ಕಾಲಮಾನ ಪ್ರಕಾರ ರಾತ್ರಿ 9.30ಕ್ಕೆ (ಗ್ರೀನ್ವಿಚ್ ಸಮಯ 16.30) ಲಾರ್ಡ್ಸ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.

Share this Story:

Follow Webdunia kannada