ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನೂತನವಾಗಿ ಬಿಡುಗಡೆ ಮಾಡಿರುವ ಏಕದಿನ ತಂಡ ರ‌್ಯಾಂಕಿಂಗ್ ಪಟ್ಟಿಯಲ್ಲಿ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿರುವ ಹೊರತಾಗಿಯೂ ಭಾರತ ದ್ವಿತೀಯ ಸ್ಥಾನದಲ್ಲಿಯೇ ಮುಂದುವರಿದಿದೆ.
ಆದರೆ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ಜತೆಗಿನ ರೇಟಿಂಗ್ ಅಂತರವನ್ನು ತಗ್ಗಿಸುವಲ್ಲಿ ಮಹಿ ಬಳಗ ಯಶಸ್ವಿಯಾಗಿದೆ. ಭಾರತದ ಇನ್ ಫಾರ್ಮ್ ಬ್ಯಾಟ್ಸ್‌ಮನ್‌ಗಳು ವೈಯಕ್ತಿಕ ರ‌್ಯಾಂಕಿಂಗ್ ಪಟ್ಟಿಯಲ್ಲಿ ಏರಿಕೆ ಕಂಡಿದ್ದಾರೆ.
121 ಅಂಕಗಳನ್ನು ಹೊಂದಿರುವ ಭಾರತ ಇದೀಗ ಆಸೀಸ್‌ಗಿಂತ ಏಳು ಅಂಕಗಳ ಹಿನ್ನಡೆ ಅನುಭವಿಸುತ್ತಿದೆ. ಹಾಗೆಯೇ ವಿಶ್ವಕಪ್ ರನ್ನರ್-ಅಪ್ ತಂಡ ಶ್ರೀಲಂಕಾ ಮೂರನೇ ಸ್ಥಾನ (118) ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಆಘಾತಕಾರಿ ಸೋಲನ್ನು ಅನುಭವಿಸಿದ್ದ ದಕ್ಷಿಣ ಆಫ್ರಿಕಾ ನಾಲ್ಕನೇ ಸ್ಥಾನದಲ್ಲಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ವೈಯಕ್ತಿಕ ವಿಭಾಗದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಗೌತಮ್ ಗಂಭೀರ್ ಮುನ್ನಡೆ ಕಾಯ್ದುಕೊಂಡಿದ್ದು, ಕ್ರಮವಾಗಿ ಒಂಬತ್ತು ಹಾಗೂ ಹತ್ತನೇ ಸ್ಥಾನ ಹಂಚಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ವಿಶ್ವಕಪ್ ಫೈನಲ್‌ನಲ್ಲಿ 97 ರನ್ನುಗಳ ಅಮೋಘ ಇನ್ನಿಂಗ್ಸ್ ಕಟ್ಟಿದ್ದ ಗಂಭೀರ್ ನಾಲ್ಕು ಸ್ಥಾನಗಳ ನೆಗೆತ ಕಂಡಿದ್ದಾರೆ.
ಹಾಗೆಯೇ ಶ್ರೀಲಂಕಾದ ತಿಲಕರತ್ನೆ ದಿಲ್‌ಶಾನ್ ಕೂಡಾ ಕ್ಯಾರಿಯರ್ ಶ್ರೇಷ್ಠ ಮೂರನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ನಾಯಕ ಕುಮಾರ ಸಂಗಕ್ಕರ ನಾಲ್ಕನೇ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶ್ವಕಪ್‌ನ ಹೀರೊ ಯುವರಾಜ್ ಸಿಂಗ್ ಆರು ಸ್ಥಾನಗಳ ನೆಗೆತ ಕಾಣುವ ಮೂಲಕ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಜತೆ ಜಂಟಿಯಾಗಿ 17ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ನಾಲ್ಕು ಸ್ಥಾನ ಏರಿಕೆ ಕಂಡಿರುವ ಸುರೇಶ್ ರೈನಾ 31ಕ್ಕೆ ತಲುಪಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಎರಡು ಸ್ಥಾನ ಭಡ್ತಿ ಪಡೆದಿರುವ ಹರಭಜನ್ ಸಿಂಗ್ 18ನೇ ಸ್ಥಾನ ವಶಪಡಿಸಿದ್ದಾರೆ. ಪಾಕಿಸ್ತಾನ ನಾಯಕ ಶಾಹಿದ್ ಆಫ್ರಿದಿ ಐದು ಸ್ಥಾನಗಳ ಏರಿಕೆ ಕಂಡು 9ಕ್ಕೆ ತಲುಪಿದ್ದಾರೆ.