Select Your Language

Notifications

webdunia
webdunia
webdunia
webdunia

ಯೂಸುಫ್ ಸ್ಫೋಟಕ ಶತಕಾರ್ಧ; ಭಾರತಕ್ಕೆ ರೋಚಕ ಜಯ

ಯೂಸುಫ್ ಸ್ಫೋಟಕ ಶತಕಾರ್ಧ; ಭಾರತಕ್ಕೆ ರೋಚಕ ಜಯ
ಕೇಪ್‌ಟೌನ್ , ಬುಧವಾರ, 19 ಜನವರಿ 2011 (10:23 IST)
ಸ್ಫೋಟಕ ಶತಕಾರ್ಧ ಬಾರಿಸಿದ ಆಲ್‌ರೌಂಡರ್ ಯೂಸುಫ್ ಪಠಾಣ್ (59) ನೆರವಿನಿಂದ ಭಾರತ ತಂಡವು ಇಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ತೃತೀಯ ಏಕದಿನ ಪಂದ್ಯವನ್ನು ಎರಡು ವಿಕೆಟುಗಳಿಂದ ರೋಚಕವಾಗಿ ಗೆದ್ದುಕೊಂಡಿದ್ದು, ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-1ರ ಮಹತ್ವದ ಮುನ್ನಡೆ ದಾಖಲಿಸಿದೆ.

ಇದರೊಂದಿಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಸ್ಮರಣೀಯ ಗೆಲುವು ದಾಖಲಿಸಲು ಹೊರಟಿರುವ ಮಹೇಂದ್ರ ಸಿಂಗ್ ಧೋನಿ ಬಳಗಕ್ಕೆ ಈ ಸಾಧನೆ ಮಾಡಲು ಇನ್ನು ಒಂದು ಜಯ ದಾಖಲಿಸಬೇಕಾಗಿದೆ.

PTI
221 ರನ್ನುಗಳ ಗೆಲುವಿನ ಗುರಿ ಬೆನ್ನತ್ತಿದ್ದ ಭಾರತದ ಅಗ್ರ ಕ್ರಮಾಂಕ ಮತ್ತೊಮ್ಮೆ ಕುಸಿತ ಕಂಡಿತ್ತು. ಮುರಳಿ ವಿಜಯ್ (1) ಸಿಕ್ಕ ಅವಕಾಶವನ್ನು ಸಾಬೀತುಪಡಿಸುವಲ್ಲಿ ಮತ್ತೊಮ್ಮೆ ವಿಫಲರಾದರು. ಸಚಿನ್ ಅನುಪಸ್ಥಿತಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ (23) ಮತ್ತು ಇನ್ ಫಾರ್ಮ್ ಆಟಗಾರ ವಿರಾಟ್ ಕೊಹ್ಲಿ (28) ಉತ್ತಮ ಆರಂಭ ಪಡೆದರ ಹೊರತಾಗಿಯೂ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವಿಫಲರಾದರು.

ಸ್ಟೈಲಿಶ್ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ (16) ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ (5) ಅವರನ್ನು ಕೂಡಾ ತಂಡ ಬೇಗನೇ ಕಳೆದುಕೊಂಡಿತ್ತು. ಒಂದು ಹಂತದಲ್ಲಿ 24.3 ಓವರುಗಳಲ್ಲಿ 93 ರನ್ನುಗಳಿಗೆ ಐದು ಪ್ರಮುಖ ವಿಕೆಟ್ ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತ್ತು.

ಆದರೆ ಆರನೇ ವಿಕೆಟ್‌ಗೆ 75 ರನ್ನುಗಳ ಅಮೂಲ್ಯ ಜತೆಯಾಟ ನೀಡಿದ ಯೂಸುಫ್ ಪಠಾಣ್ ಮತ್ತು ಸುರೇಶ್ ರೈನಾ (37) ಪಂದ್ಯದ ಪರಿಸ್ಥಿತಿಯನ್ನೇ ಬದಲಾಯಿಸಿದರು. ಕೇವಲ 50 ಎಸೆತಗಳನ್ನು ಎದುರಿಸಿದ ಯೂಸುಫ್ ಆರು ಬೌಂಡರಿ ಹಾಗೂ ಮೂರು ಭರ್ಜರಿ ಸಿಕ್ಸರುಗಳ ನೆರವಿನಿಂದ 59 ರನ್ ಗಳಿಸಿದರು. ಅದೇ ರೀತಿ ರೈನಾ 47 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಿಂದ 37 ರನ್ ಗಳಿಸಿದರು.

ನಂತರ ಇವರಿಬ್ಬರ ವಿಕೆಟುಗಳನ್ನು ಬೆನ್ನು ಬೆನ್ನಿಗೆ ಕಳೆದುಕೊಂಡ ಭಾರತ ಮತ್ತೊಮ್ಮೆ ಆಂತಕಕ್ಕೆ ಸಿಲುಕಿತ್ತು. ಆದರೆ ಕೊನೆಯ ಹಂತದಲ್ಲಿ 26 ರನ್ನುಗಳ ಜತೆಯಾಟ ನೀಡಿದ ಹರಭಜನ್ ಸಿಂಗ್ (23*) ಮತ್ತು ಜಹೀರ್ ಖಾನ್ (14) ತಂಡಕ್ಕೆ ರೋಚಕ ಗೆಲುವು ಒದಗಿಸಿಕೊಟ್ಟರು.

25 ಎಸೆತಗಳನ್ನು ಎದುರಿಸಿದ ಭಜ್ಜಿ ಎರಡು ಸಿಕ್ಸರುಗಳ ನೆರವಿನಿಂದ ಅಜೇಯ 23 ರನ್ ಗಳಿಸಿದರು. ಹಾಗೆಯೇ ವಿನ್ನಿಂಗ್ ಶಾಟ್ ಹೊಡೆದ ನೆಹ್ರಾ 6 ರನ್ ಗಳಿಸಿ ಔಟಾಗದೆ ಉಳಿದರು. ದಕ್ಷಿಣ ಆಫ್ರಿಕಾ ಪರ ಮೊರ್ನೆ ಮೊರ್ಕೆಲ್ 28ಕ್ಕೆ ಮೂರು ವಿಕೆಟ್ ಕಿತ್ತರು.

ಇದಕ್ಕೂ ಮೊದಲು ಡೆಬ್ಯುಟ್ ಆಟಗಾರ ಫಾವ್ ಡು ಫ್ಲೆಸ್ಸಿಸ್ (60) ಮತ್ತು ಜೆಪಿ ಡ್ಯುಮಿನಿ (52) ಬಾರಿಸಿದ ಆಕರ್ಷಕ ಅರ್ಧಶತಕಗಳ ಹೊರತಾಗಿಯೂ ಕುಸಿತ ಕಂಡಿದ್ದ ದಕ್ಷಿಣ ಆಫ್ರಿಕಾ ತಂಡ 49.2 ಓವರುಗಳಲ್ಲಿ 220 ರನ್ನುಗಳಿಗೆ ಸರ್ವಪತನಗೊಂಡಿತ್ತು. ಭಾರತ ಪರ ಜಹೀರ್ ಖಾನ್ ಮೂರು ಮತ್ತು ಮುನಾಫ್ ಪಟೇಲ್ ಹಾಗೂ ಹರಭಜನ್ ಸಿಂಗ್ ತಲಾ ಎರಡು ವಿಕೆಟ್ ಕಿತ್ತಿದ್ದರು.

Share this Story:

Follow Webdunia kannada