ಒಂದೆಡೆ ವಿಶ್ವಕಪ್‌ಗಾಗಿನ ತಂಡವನ್ನು ಆರಿಸಲಾಗಿದೆಯಾದರೂ ಮತ್ತೊಂದೆಡೆ ಭಾರತ ತಂಡ ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೂರನೇ ಏಕದಿನಕ್ಕೆ ಸಜ್ಜಾಗುತ್ತಿದ್ದು, ಅಗ್ರ ಕ್ರಮಾಂಕವೇ ಚಿಂತೆಗೆ ಕಾರಣವಾಗಿದೆ.
ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಬೆನ್ನಲ್ಲೇ ಇದೀಗ ಗಾಯದ ಸಮಸ್ಯೆಗೆ ಸಿಲುಕಿರುವ ಸಚಿನ್ ತೆಂಡೂಲ್ಕರ್ ಕೂಡಾ ಸರಣಿಯ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದು, ತವರಿಗೆ ಮರಳಿದ್ದಾರೆ. ಇದರಿಂದಾಗಿ ತಂಡದ ಇನ್ನಿಂಗ್ಸನ್ನು ಯಾರು ಆರಂಭಿಸಲಿದ್ದಾರೆ ಎಂಬುದು ಸಮಸ್ಯೆಗೆ ಕಾರಣವಾಗಿದೆ.
ದ್ವಿತೀಯ ಏಕದಿನವನ್ನು ಕೇವಲ ಒಂದು ರನ್ ಅಂತರದಿಂದ ವಶಪಡಿಸಿಕೊಂಡಿದ್ದ ಭಾರತ ಆತಿಥೇಯರಿಗೆ ಸರಣಿಯಲ್ಲಿ ತಿರುಗೇಟು ನೀಡಿತ್ತಲ್ಲದೆ ಐದು ಪಂದ್ಯಗಳನ್ನು 1-1ರಲ್ಲಿ ಸಮಬಲ ಮಾಡಿತ್ತು. ಸಚಿನ್ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಗುಜರಾತ್ ವಿಕೆಟ್ ಕೀಪರ್ ಆರಂಭಿಕ ಬ್ಯಾಟ್ಸ್‌ಮನ್ ಪಾರ್ಥಿವ್ ಪಾಟೇಲ್ ಅವರಿಗೆ ಬುಲಾವ್ ನೀಡಲಾಗಿದೆ. ಆದರೆ ಗಂಭೀರ್ ಮತ್ತು ಸೆಹ್ವಾಗ್ ಕೊರತೆಯನ್ನು ನೀಗಿಸುವಲ್ಲಿ ಮುರಳಿ ವಿಜಯ್ ವಿಫಲರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಯುವರಾಜ್ ಸಿಂಗ್ ಫಾರ್ಮ್‌ಗೆ ಮರಳಿರುವುದು ಕೊಂಚ ಸಮಾಧಾನ ತಂದಿದೆ. ಇದರಿಂದಾಗಿ ಮೂರನೇ ಏಕದಿನದಲ್ಲಿ ಯುವಿ ಪಾತ್ರ ನಿರ್ಣಾಯಕ ಎನಿಸಲಿದೆ. ರೋಹಿತ್ ಶರ್ಮಾ ಮತ್ತು ಸುರೇಶ್ ರೈನಾ ಲಯ ಕಂಡುಕೊಳ್ಳುವಲ್ಲಿ ಎಡವಿದ್ದಾರೆ. ಹಿರಿಯರ ಅನುಪಸ್ಥಿತಿ ಹಿನ್ನೆಲೆಯಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಗ್ರ ಕ್ರಮಾಂಕಕ್ಕೆ ಭಡ್ತಿ ಪಡೆಯುವ ಅಗತ್ಯವಿದೆ. ಹಾಗೆಯೇ ವಿರಾಟ್ ಕೊಹ್ಲಿ ಅವರ ಸಮಯೋಚಿತ ಆಟದ ಅಗತ್ಯವಿದೆ. ಎರಡನೇ ಏಕದಿನದಲ್ಲಿ ಭಾರತದ ಗೆಲುವಿಗೆ ಕಾರಣರಾಗಿದ್ದ ಮುನಾಫ್ ಪಟೇಲ್ ಮತ್ತದೇ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಜಹೀರ್ ಖಾನ್, ಆಶಿಶ್ ನೆಹ್ರಾ ಮತ್ತು ಹರಭಜನ್ ಸಿಂಗ್ ಕೂಡಾ ಪರಿಣಾಮಕಾರಿ ಎನಿಸಿಕೊಳ್ಳಬೇಕಾಗಿದೆ. ಪ್ರವೀಣ್ ಕುಮಾರ್ ಅನುಪಸ್ಥಿತಿಯಲ್ಲಿ ವೇಗಿಗಳು ಶ್ರೇಷ್ಠ ಪ್ರದರ್ಶನ ನೀಡಲು ಯಶಸ್ವಿಯಾಗಿದ್ದರು.ಮತ್ತೊಂದೆಡೆ ದಕ್ಷಿಣ ಆಫ್ರಿಕಾದ ಅಗ್ರ ಕ್ರಮಾಂಕದ ಆಟಗಾರರು ಅಮೋಘ ಫಾರ್ಮ್‌ನಲ್ಲಿದ್ದಾರೆ. ನಾಯಕ ಗ್ರೇಮ್ ಸ್ಮಿತ್ ಸೇರಿದಂತೆ, ಹಾಶೀಮ್ ಆಮ್ಲಾ, ಎಬಿ ಡಿ ವಿಲಿಯರ್ಸ್ ಮತ್ತು ಜೆಪಿ ಡ್ಯುಮಿನಿ ಅಪಾಯಕಾರಿ ಎನಿಸಿಕೊಂಡಿದ್ದಾರೆ. ಎಡಗೈ ವೇಗಿ ಲೊನ್ವೆಬೊ ತ್ಸೊತ್ಸೊಬೆ ಭಾರತಕ್ಕೆ ಮಾರಕವಾಗಿ ಪರಿಣಮಿಸಿದ್ದಾರೆ. ಡೇಲ್ ಸ್ಟೈನ್ ಮತ್ತು ಮೊರ್ನೆ ಮೊರ್ಕೆಲ್ ಕೂಡಾ ಅಮೋಘ ಲಯದಲ್ಲಿದ್ದಾರೆ. ಒಟ್ಟಿನಲ್ಲಿ ಮತ್ತೊಮ್ಮೆ ಸರ್ವಾಂಗೀಣ ಪ್ರದರ್ಶನ ನೀಡಿದ್ದಲ್ಲಿ ಮಾತ್ರ ಭಾರತ ಯಶಸ್ಸು ಸಾಧಿಸಲಿದೆ.ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿತಂಡ ಇಂತಿದೆ: ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ, ವಿಕೆಟ್ ಕೀಪರ್), ಮುರಳಿ ವಿಜಯ್, ಯುವರಾಜ್ ಸಿಂಗ್, ಆರ್. ಅಶ್ವಿನ್, ಪಿಯೂಷ್ ಚಾವ್ಲಾ, ಹರಭಜನ್ ಸಿಂಗ್, ಜಹೀರ್ ಖಾನ್, ವಿರಾಟ್ ಕೊಹ್ಲಿ, ಪ್ರವೀಣ್ ಕುಮಾರ್, ಆಶಿಶ್ ನೆಹ್ರಾ, ಮುನಾಫ್ ಪಟೇಲ್, ಯೂಸುಫ್ ಫಠಾಣ್, ಸುರೇಶ್ ರೈನಾ, ರೋಹಿತ್ ಶರ್ಮಾ ಮತ್ತು ಎಸ್. ಶ್ರೀಶಾಂತ್ದಕ್ಷಿಣ ಆಪ್ರಿಕಾ: ಗ್ರೇಮ್ ಸ್ಮಿತ್ (ನಾಯಕ), ಹಾಶೀಮ್ ಆಮ್ಲಾ, ಜೋಹಾನ್ ಬೋಥಾ, ಎಬಿ ಡಿ ವಿಲಿಯರ್ಸ್ (ವಿಕೆಟ್ ಕೀಪರ್), ಜೀನ್ ಪಾಲ್ ಡ್ಯುಮನಿ, ಫಾವ್ ಡು ಪ್ಲೆಸ್ಸಿಸ್, ಇಮ್ರಾನ್ ತಾಹಿರ್, ಕಾಲಿನ್ ಇಂಗ್ರಾಮ್, ಡೇವಿಡ್ ಮಿಲ್ಲರ್, ಮೊರ್ನೆ ಮೊರ್ಕೆಲ್, ವೇಯ್ನ್ ಪಾರ್ನೆಲ್, ರಾಬಿನ್ ಪೀಟರ್‌ಸನ್, ಡೇಲ್ ಸ್ಟೈನ್ ಮತ್ತು ಲೊನ್ವೆಬೊ ತ್ಸೊತ್ಸೊಬೆ. ಪಂದ್ಯಾರಂಭ: ಸಂಜೆ 6ಕ್ಕೆ (ಭಾರತೀಯ ಕಾಲಮಾನ)