ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಆರಂಭದಿಂದಲೇ ಚಚ್ಚಲು ಮುಂದಾಗಿ - ಹೀಗೆಂದು ಕರೆ ನೀಡಿರುವುದು ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಕೋಚ್ ಡಂಕನ್ ಫ್ಲೆಚರ್. ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿ ಹೀನಾಯವಾಗಿ ಸೋಲುಂಡಿರುವ ಟೀಮ್ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲಿ ತಿರುಗಿ ಬೀಳಬಹುದು ಎಂಬ ಭೀತಿಯಲ್ಲಿರುವ ಅವರು ತನ್ನ ಆಟಗಾರರಿಗೆ ಸಲಹೆ ನೀಡಿರುವ ರೀತಿಯಿದು.
ಐದು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತವನ್ನು ದಕ್ಷಿಣ ಆಫ್ರಿಕಾ 135 ರನ್ನುಗಳ ಭಾರೀ ಅಂತರದಿಂದ ಮಣಿಸಿತ್ತು.
ಟೆಸ್ಟ್ ಸರಣಿಯಲ್ಲಿ ನಾವು ಆ ತಂಡವನ್ನು ನೋಡಿರುವುದರಿಂದ ನಾವು ಎಚ್ಚರಿಕೆಯಿಂದ ಸಾಗಬೇಕಾಗಿದೆ. ಆದರೂ ಅದು ಪುನರಾವರ್ತನೆಯಾಗದು ಎನ್ನುವ ಭರವಸೆ ನನ್ನಲ್ಲಿದೆ. ನಮ್ಮ ಏಕದಿನ ತಂಡವೀಗ ಅತ್ಯುತ್ತಮವಾಗಿದೆ. ಅವರು ಸಾಕಷ್ಟು ಪಾಠ ಕಲಿತಿದ್ದಾರೆ ಎಂಬಂತೆ ಕಾಣುತ್ತಿದ್ದಾರೆ. ಹಾಗಾಗಿ ಈ ಪಂದ್ಯದಲ್ಲೂ ಭಾರತವನ್ನು ಆರಂಭದಿಂದಲೇ ಚಚ್ಚಲು ಶುರು ಹಚ್ಚಿಕೊಳ್ಳಿ ಎಂದು ಪಂದ್ಯ ಆರಂಭಕ್ಕೂ ಮೊದಲು ಮಾತನಾಡುತ್ತಾ ಫ್ಲೆಚರ್ ತಿಳಿಸಿದ್ದಾರೆ.
ಇಲ್ಲಿ ಪ್ರಮುಖ ವಿಚಾರ ಇರುವುದು ಎದುರಾಳಿ ತಂಡ ನೆಮ್ಮದಿಯಿಂದ ಇರದಂತೆ ನೋಡಿಕೊಳ್ಳುವುದು. ಭಾರತವು ಅನುಭವಿ ತಂಡ. ಅವರಲ್ಲಿ ಯುವ ಆಟಗಾರರಿದ್ದರೂ, ಅವರು ಕೂಡ ಸಾಕಷ್ಟು ಅನುಭವಿಗಳು. ಈ ಸಂಗತಿಯನ್ನು ಎಚ್ಚರಿಕೆಯಿಂದ ಗಮನದಲ್ಲಿಟ್ಟುಕೊಳ್ಳಬೇಕು. ಇಂತಹ ಪರಿಸ್ಥಿತಿಯಲ್ಲಿ ಹೇಗೆ ಆಡಬೇಕು ಎನ್ನುವುದು ಅವರಿಗೆ ಗೊತ್ತು. ಹಾಗಾಗಿ ದಕ್ಷಿಣ ಆಫ್ರಿಕಾ ಸಾಕಷ್ಟು ಜಾಗರೂಕತೆಯಿಂದ ಇರಬೇಕು ಎಂದು ಇಂಗ್ಲೆಂಡ್ ಮಾಜಿ ತರಬೇತುದಾರ ಅಭಿಪ್ರಾಯಪಟ್ಟರು.
ಮೊದಲ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿರುವ ಹೊರತಾಗಿಯೂ ತನ್ನ ತಂಡದ ನಿರ್ವಹಣೆ ತರಬೇತುದಾರನಿಗೆ ತೃಪ್ತಿ ತಂದಿಲ್ಲ. ಪವರ್-ಪ್ಲೇ ಸಂದರ್ಭಗಳಲ್ಲಿ ತಂಡವು ತೋರಿಸಿರುವ ಪ್ರದರ್ಶನ ಸೂಕ್ತವಾಗಿಲ್ಲ ಎಂದು ಹೇಳಿದ್ದಾರೆ.