ಉತ್ತಪ್ಪಗೆ ಬಾರಿ ಡಿಮ್ಯಾಂಡ್; ಆರ್‌ಸಿಬಿಗೆ ಬೇಡವಾದ ದ್ರಾವಿಡ್
ಬೆಂಗಳೂರು , ಶನಿವಾರ, 8 ಜನವರಿ 2011 (16:59 IST)
ಐಪಿಎಲ್ ನಾಲ್ಕನೇ ಆವೃತ್ತಿಗಾಗಿನ ಹರಾಜಿನಲ್ಲಿ ಸ್ಥಳೀಯ ಫೆವರೀಟುಗಳಾದ ರಾಹುಲ್ ದ್ರಾವಿಡ್ ಮತ್ತು ರಾಬಿನ್ ಉತ್ತಪ್ಪ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಡೆಗಣಿಸಿದೆ. ಆದರೆ ಹರಾಜಿನಲ್ಲಿ ನಿರೀಕ್ಷೆಗೂ ಮೀರಿ ಬೇಡಿಕೆ ಗಿಟ್ಟಿಸಿಕೊಂಡಿರುವ ರಾಬಿನ್ ಉತ್ತಪ್ಪ ಅವರನ್ನು ನೂತನ ಪುಣೆ ಫ್ರಾಂಚೈಸಿ 9.66 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಸ್ಫೋಟಕ ದಾಂಡಿಗನಾಗಿರುವ ಉತ್ತಪ್ಪ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲರು. ಇದುವೇ ಅವರ ಬೇಡಿಕೆ ಏರಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ ಹರಾಜಿಗೆ ಬಿಟ್ಟುಕೊಡಲಾಗಿದ್ದ ದ್ರಾವಿಡ್ ಅವರನ್ನು ರಾಜಸ್ತಾನ ತಂಡ 2.3 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಈ ಎರಡು ಪ್ರಮುಖ ಆಟಗಾರರನ್ನು ಆರ್‌ಸಿಬಿ ಕಡೆಗಣಿಸಿರುವುದು ಅಭಿಮಾನಿಗಳಲ್ಲಿ ಭಾರಿ ನಿರಾಸೆಗೆ ಕಾರಣವಾಗುತ್ತಿದೆ. ಕಳೆದ ಬಾರಿ ಟೆಸ್ಟ್ ತಂಡವೆಂಬ ಮುಜುಗರಕ್ಕೆ ಒಳಗಾಗಿದ್ದ ಆರ್‌ಸಿಬಿ ಈ ಬಾರಿ ತಿಲಕರತ್ನೆ ದಿಲ್‌ಶಾನ್ (2.99 ಕೋಟಿ), ಜಹೀರ್ ಖಾನ್ (4.14), ಎಬಿ ಡಿ ವಿಲಿಯರ್ಸ್ (5.06) ಮತ್ತು ಡ್ಯಾನಿಯಲ್ ವಿಟ್ಟೋರಿ (2.53) ಅವರಂತಹ ಪ್ರಮುಖ ಆಟಗಾರರನ್ನು ಖರೀದಿಸಿದೆ. ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ