Select Your Language

Notifications

webdunia
webdunia
webdunia
webdunia

ಸೆಹ್ವಾಗ್, ಸಚಿನ್ ಔಟ್; ಒತ್ತಡದಲ್ಲಿ ಟೀಮ್ ಇಂಡಿಯಾ

ಸೆಹ್ವಾಗ್, ಸಚಿನ್ ಔಟ್; ಒತ್ತಡದಲ್ಲಿ ಟೀಮ್ ಇಂಡಿಯಾ
ಡರ್ಬಾನ್ , ಭಾನುವಾರ, 26 ಡಿಸೆಂಬರ್ 2010 (18:18 IST)
ಮಂಜಿನ ಕಾರಣದಿಂದ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಬಹುತೇಕ ಮೊದಲ ಟೆಸ್ಟ್ ಪಂದ್ಯದಲ್ಲಿ ಎದುರಿಸಿದ ಸ್ಥಿತಿಯನ್ನೇ ಕಾಣುತ್ತಿದೆ. ದಕ್ಷಿಣ ಆಫ್ರಿಕಾದ ಬೌಲರುಗಳೆದುರು ಟೀಮ್ ಇಂಡಿಯಾದ ಘಟಾನುಘಟಿಗಳು ರನ್ ಗಳಿಸಲಾಗದೆ ಪೆಲಿವಿಯನ್ ಯಾತ್ರೆ ಮಾಡುತ್ತಿದ್ದಾರೆ.

ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ಹೀನಾಯವಾಗಿ ಕಳೆದುಕೊಂಡಿರುವ ಭಾರತಕ್ಕೆ ಇದು ಬಾಕ್ಸಿಂಗ್ ಡೇ ಮ್ಯಾಚ್. ಆದರೆ ಮೇಲ್ನೋಟಕ್ಕೆ ಇಲ್ಲೂ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸುವ ಕೆಲವು ಲಕ್ಷಣಗಳು ಗೋಚರಿಸುತ್ತಿವೆ.

ಗಾಯಾಳು ಗಂಭೀರ್ ಬದಲಿಗೆ ಕಣಕ್ಕಿಳಿದ ಮುರಳಿ ವಿಜಯ್ (19) ಮತ್ತು ಹೊಡೆಬಡಿ ದಾಂಡಿಗ ವೀರೇಂದ್ರ ಸೆಹ್ವಾಗ್ (25) ಇಬ್ಬರೂ ಎರಡು ಓವರುಗಳ ಅಂತರದಲ್ಲಿ ವಿಕೆಟ್ ಕಳೆದುಕೊಂಡರು. ಇಬ್ಬರನ್ನೂ ಬಲಿ ಪಡೆದದ್ದು ಅದೇ ಡೇಂಜರಸ್ ಡೇಲ್ ಸ್ಟೈನ್.

ಸಚಿನ್ ತೆಂಡೂಲ್ಕರ್ ಕೂಡ ಅದೇ ಹಾದಿ ತುಳಿದಿದ್ದಾರೆ. ಅವರು 13 ರನ್ ಗಳಿಸಿದ್ದ ಹೊತ್ತಿನಲ್ಲಿ ಲೊನ್ವಾಬೊ ತ್ಸೊತ್ಸೊಬೆ ಎಸೆತವನ್ನು ಜಾಕ್ವಾಸ್ ಕ್ಯಾಲಿಸ್ ಕೈಗಿತ್ತು ಮರಳಬೇಕಾಯಿತು. ಇವರ ಬೆನ್ನಿಗೆ ರಾಹುಲ್ ದ್ರಾವಿಡ್‌ರನ್ನು (25) ಸ್ಟೈನ್ ಬಲಿ ಪಡೆದರು.

ಒಟ್ಟಾರೆ 40 ಓವರುಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿರುವ ಭಾರತ 129 ರನ್ ಗಳಿಸಿದೆ.

ವಿವಿಎಸ್ ಲಕ್ಷ್ಮಣ್ (38) ಮತ್ತು ಚೇತೇಶ್ವರ್ ಪೂಜಾರ (1) ಬ್ಯಾಟಿಂಗ್ ಮಾಡುತ್ತಿದ್ದಾರೆ.

ಇತ್ತೀಚಿನ ಸ್ಕೋರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.

ಎರಡನೇ ಟೆಸ್ಟ್‌ನಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಪ್ರಮುಖವಾಗಿ ಮೂರು ಬದಲಾವಣೆಗಳನ್ನು ಮಾಡಿದ್ದಾರೆ. ಗಾಯಾಳುವಾಗಿದ್ದ ಆರಂಭಿಕ ಆಟಗಾರ ಗೌತಮ್ ಗಂಭೀರ್ ನಿರೀಕ್ಷೆಯಂತೆ ಹೊರಗುಳಿದಿದ್ದರೆ, ಸುರೇಶ್ ರೈನಾ ಮತ್ತು ಜೈದೇವ್ ಉನಾದ್ಕತ್ ಅವರಿಗೆ ಕೊಕ್ ನೀಡಲಾಗಿದೆ. ಇವರ ಬದಲು ಮುರಳಿ ವಿಜಯ್, ಚೇತೇಶ್ವರ ಪೂಜಾರಾ ಮತ್ತು ಜಹೀರ್ ಖಾನ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

Share this Story:

Follow Webdunia kannada