ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಗೆಲ್ಲಲು ಸಾಧ್ಯವಾಗಿರುವುದರಿಂದ ನನ್ನ ಅಜೇಯ ಶತಕ ವಿಶೇಷವಾದುದು ಎಂದು ಕೆಲಕಾಲ ಲಯ ಕಳೆದುಕೊಂಡು ಇದೀಗ ಸತತ ಎರಡು ಶತಕಗಳನ್ನು ದಾಖಲಿಸಿರುವ ಟೀಮ್ ಇಂಡಿಯಾ ಹಂಗಾಮಿ ಕಪ್ತಾನ ಗೌತಮ್ ಗಂಭೀರ್ ಹೇಳಿದ್ದಾರೆ.
ಎಲ್ಲಾ ಶತಕಗಳು ಮುಖ್ಯವಾದುವು. ಸರಣಿ ಗೆಲ್ಲಲು ಸಹಾಯವಾಗಿರುವುದರಿಂದ ಇದು ವಿಶೇಷವಾದುದು. ಅದರಲ್ಲೂ ಆಟಗಾರನೊಬ್ಬ ಕೆಲವು ಪಂದ್ಯಗಳಲ್ಲಿ ಕಡಿಮೆ ರನ್ ಗಳಿಸಿದ ನಂತರ ಈ ರೀತಿಯಾಗಿ ರನ್ ಕಲೆ ಹಾಕಲು ಸಾಧ್ಯವಾಗಿರುವುದು ಪ್ರಮುಖ ವಿಚಾರ ಎಂದು ಕಪ್ತಾನ ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ನಾಯಕತ್ವದ ಹೊಣೆಗಾರಿಕೆ ನಿಭಾಯಿಸುತ್ತಿರುವ ಗಂಭೀರ್ ಅಭಿಪ್ರಾಯಪಟ್ಟರು.
ಸರಣಿಯಲ್ಲಿ ಕಿವೀಸರಿಗೆ ತಿರುಗಿ ಬೀಳಲು ಯಾವುದೇ ಅವಕಾಶವನ್ನು ಭಾರತ ನೀಡದೇ ಇರುವುದು ಗಮನ ಸೆಳೆಯುವ ಅಂಶ ಮತ್ತು ಮುಖ್ಯವಾದುದು ಎಂದು ಸರಣಿಯ ಮೂರನೇ ಏಕದಿನದಲ್ಲಿ ಒಂಬತ್ತು ವಿಕೆಟುಗಳ ಜಯ ಸಾಧಿಸಿದ ನಂತರ ಅವರು ತಿಳಿಸಿದರು.
ಈ ಪಂದ್ಯದಲ್ಲಿ 117 ಎಸೆತಗಳಿಂದ 126 ರನ್ ದಾಖಲಿಸುವ ಮೂಲಕ ಗಂಭೀರ್ ಸತತ ಎರಡನೇ ಶತಕ ಬಾರಿಸಿದ್ದರು. ಅವರ ಸಹಾಯದಿಂದ ಭಾರತವು ಸರಣಿಯಲ್ಲಿ 3-0 ಮುನ್ನಡೆ ಪಡೆದುಕೊಂಡಿದೆ. ಇನ್ನೆರಡು ಪಂದ್ಯಗಳಷ್ಟೇ ಬಾಕಿ ಉಳಿದಿವೆ.
ಅದೇ ಹೊತ್ತಿಗೆ ಗಂಭೀರ್ ಬೌಲರುಗಳನ್ನು ಕೂಡ ಪ್ರಶಂಸಿಸಿದ್ದಾರೆ. ಜಹೀರ್ ಅತ್ಯುತ್ತಮ ಗುಣಮಟ್ಟದ ಆಟ ನೀಡಬಲ್ಲ ಬೌಲರ್. ಅವರ ಉಪಸ್ಥಿತಿ ತಂಡಕ್ಕೆ ಯಾವತ್ತೂ ಸಹಾಯವಾಗಿದೆ. ಗಾಯಾಳುವಾಗಿ ಹೊರಗುಳಿದು ವಾಪಸ್ ಬಂದಿರುವ ಅವರು ಆಟವನ್ನು ನಮ್ಮ ಕಡೆ ವಾಲಿಸಿದರು. ಸ್ಪಿನ್ನರುಗಳ ಕಾರ್ಯ ಕೂಡ ಮಹತ್ವವಾದುದು ಎಂದರು.
ಮುಂದಿನ ಏಕದಿನಗಳು ಕ್ರಮವಾಗಿ ಬೆಂಗಳೂರು ಮತ್ತು ಚೆನ್ನೈಗಳಲ್ಲಿ ನಡೆಯಲಿವೆ.
ನಾವು ಇದನ್ನು ಮೂರು ಪಂದ್ಯಗಳ ಏಕದಿನ ಸರಣಿಯೆಂದೇ ಪರಿಗಣಿಸಿದ್ದೇವೆ. ಅದರಲ್ಲಿ 3-0 ಅಂತರದ ಜಯ ಸಾಧಿಸಿರುವುದು ಸಂತಸ ತಂದಿದೆ. ಈಗ ನಮ್ಮ ಗುರಿ 4-0, ಬಳಿಕ 5-0. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮೊದಲು ಇಂತಹ ಸತತ ಜಯಗಳು ನಮಗೆ ಅಗತ್ಯವಾಗಿದೆ ಎಂದರು.
ನ್ಯೂಜಿಲೆಂಡ್ ಕಪ್ತಾನ ಡೇನಿಯಲ್ ವೆಟ್ಟೋರಿ ಮಾತನಾಡುತ್ತಾ, ನಾವು ಈಗಲೂ ಹೊಡೆಸಿಕೊಳ್ಳುತ್ತಿದ್ದೇವೆ; ತಿರುಗಿ ಬೀಳುವ ಅಗತ್ಯವಿದೆ. ನಮ್ಮ ಅಗ್ರ ಕ್ರಮಾಂಕ ಸಮರ್ಥ ಆಟ ನೀಡಬೇಕಾಗಿದ್ದು, ಇನ್ನುಳಿದ ಪಂದ್ಯಗಳನ್ನಾದರೂ ಗೆಲ್ಲಲು ಯತ್ನಿಸುತ್ತೇವೆ. ಆ ಭರವಸೆ ನಮ್ಮಲ್ಲಿದೆ ಎಂದರು.