Select Your Language

Notifications

webdunia
webdunia
webdunia
webdunia

ಬೌಲಿಂಗ್‌ನಲ್ಲಿ ಮತ್ತಷ್ಟು ಸುಧಾರಣೆ ಅಗತ್ಯ: ಹರಭಜನ್

ಬೌಲಿಂಗ್‌ನಲ್ಲಿ ಮತ್ತಷ್ಟು ಸುಧಾರಣೆ ಅಗತ್ಯ: ಹರಭಜನ್
ನಾಗ್ಪುರ , ಮಂಗಳವಾರ, 23 ನವೆಂಬರ್ 2010 (18:14 IST)
ನನ್ನ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ತೃಪ್ತನಾಗಿದ್ದೇನೆ. ಆದರೆ ಬೌಲಿಂಗ್‌ನಲ್ಲಿ ಇನ್ನಷ್ಟು ಸುಧಾರಣೆ ಕಾಣಬೇಕಾಗಿದೆ ಎಂದು ಇದೀಗಷ್ಟೇ ನ್ಯೂಜಿಲೆಂಡ್ ವಿರುದ್ಧ ಅಂತ್ಯಗೊಂಡ ಟೆಸ್ಟ್ ಸರಣಿಯಲ್ಲಿ ಆಲ್‌ರೌಂಡರ್ ಪ್ರದರ್ಶನ ನೀಡುವ ಮೂಲಕ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಸತತ ಎರಡು ಶತಕ ಸಿಡಿಸಿದ್ದ ಭಜ್ಜಿ ಅಮೋಘ ಆಲ್‌ರೌಂಡರ್ ಪ್ರದರ್ಶನ ನೀಡಿದ್ದರು. ಆದರೆ ಬೌಲಿಂಗ್ ನಿರೀಕ್ಷಿತ ಮಟ್ಟಕ್ಕೆ ತಲುಪಲಿಲ್ಲ ಎಂಬುದನ್ನು ಒಪ್ಪಿಕೊಂಡಿರುವ ಟರ್ಬನೇಟರ್ ಭಜ್ಜಿ ಇನ್ನಷ್ಟು ವಿಕೆಟ್ ಪಡೆಯಬೇಕಿತ್ತು ಎಂದು ಹೇಳಿದರು.

ಸರಣಿಯಲ್ಲಿ ಒಟ್ಟು ಎರಡು ಶತಕ ಹಾಗೂ ಒಂದು ಅರ್ಧಶತಕದ ನೆರವಿನಿಂದ 315 ರನ್ ಗಳಿಸಿದ್ದ ಹರಭಜನ್ ಬೌಲಿಂಗ್‌ನಲ್ಲೂ ಹತ್ತು ವಿಕೆಟ್ ವಿಕೆಟ್ ಪಡೆದಿದ್ದರು. ಆ ಮೂಲಕ ಕಿವೀಸ್ ಸರಣಿಯನ್ನು 1-0ರ ಅಂತರದಲ್ಲಿ ವಶಪಡಿಸಿಕೊಳ್ಳಲು ನೆರವಾಗಿದ್ದರು.

ನಾನು ಪರಿಣಾಮಕಾರಿ ಬೌಲಿಂಗ್ ಸಂಘಟಿಸಿದ್ದೆ. ಆದರೆ ನನ್ನ ಗುಣಮಟ್ಟಕ್ಕೆ ತಕ್ಕಷ್ಟು ವಿಕೆಟ್ ಲಭಿಸಲಿಲ್ಲ. ಒಂದು ವೇಳೆ 15-16 ವಿಕೆಟ್ ಪಡೆದಿದ್ದರೆ ಸಂತೋಷಪಡುತ್ತಿದ್ದೆ ಎಂದವರು ಹೇಳಿದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸವಾಲಿನ ಸರಣಿ...
ಅದೇ ಹೊತ್ತಿಗೆ ಮುಂಬರುವ ದಕ್ಷಿಣ ಆಫ್ರಿಕಾ ಸವಾಲಿನಿಂದ ಕೂಡಿರಲಿದೆ ಎಂದವರು ಹೇಳಿದರು. ಅಲ್ಲಿ ನಾವು ಶ್ರೇಷ್ಠ ಪ್ರದರ್ಶನ ನೀಡಬೇಕಾಗಿದೆ. ನಮ್ಮ ಸಾಮರ್ಥ್ಯ ತಕ್ಕ ಆಟವಾಡಿದ್ದಲ್ಲಿ ಖಂಡಿತವಾಗಿಯೂ ಸರಣಿ ಗೆಲ್ಲಲಿದ್ದೇವೆ ಎಂದವರು ಭರವಸೆ ವ್ಯಕ್ತಪಡಿಸಿದರು.

ಅದೇ ಹೊತ್ತಿಗೆ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡಾ ಬೌಲರುಗಳ ಪ್ರದರ್ಶನವನ್ನು ಅದರಲ್ಲೂ ಪ್ರಮುಖವಾಗಿ ವೇಗಿಗಳ ಪ್ರದರ್ಶನವನ್ನು ಕೊಂಡಾಡಿದರು.

ಮೊದಲ ದಿನದಲ್ಲಿ ವೇಗಿಗಳು ಸ್ಮರಣೀಯ ದಾಳಿ ಸಂಘಟಿಸಿದರು. ವಿಕೆಟ್‌ನಿಂದ ಹೆಚ್ಚಿನ ನೆರವು ದೊರಕಲಿಲ್ಲ. ಆದರೂ ವಿಕೆಟ್ ಪಡೆಯುವಲ್ಲಿ ವೇಗಿಗಳು ಯಶಸ್ವಿಯಾದರು. ಇವರಿಗೆ ಸ್ಪಿನ್ನರುಗಳಿಂದ ಉತ್ತಮ ಬೆಂಬಲ ದೊರಕಿತು ಎಂದವರು ಹೇಳಿದರು.

ಇಶಾಂತ್ ಚೆನ್ನಾಗಿ ದಾಳಿ ಮಾಡಿದರು. ಅವರು ತಂಡದಲ್ಲಿರಲಿಲ್ಲ. ಹಾಗಾಗಿ ಕಿವೀಸ್‌ಗೆ ಹೊಸತಾಗಿದ್ದರು. ಸಂದರ್ಭ ಬಂದಾಗ ಉತ್ತಮ ಲೈನ್ ಮೂಲಕ ವಿಕೆಟ್ ಪಡೆದರು ಎಂದವರು ಸೇರಿಸಿದರು.

ಆದರೆ ತಂಡದ ಕ್ಷೇತ್ರ ರಕ್ಷಣೆ ಬಗ್ಗೆ ನಾಯಕ ಸಂತೃಪ್ತರಾಗಲಿಲ್ಲ. ಹಲವಾರು ತಪ್ಪುಗಳನ್ನು ಮಾಡಿದ್ದೇವೆ. ಈ ವಿಭಾಗದಲ್ಲಿ ಸುಧಾರಣೆಯಾಗಬೇಕಿದೆ ಎಂದವರು ಹೇಳಿದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

Share this Story:

Follow Webdunia kannada