50ನೇ ಟೆಸ್ಟ್ ಶತಕದತ್ತ ಸಚಿನ್; ಭಾರತ ಮೇಲುಗೈ
ನಾಗ್ಪುರ , ಭಾನುವಾರ, 21 ನವೆಂಬರ್ 2010 (17:43 IST)
ನ್ಯೂಜಿಲೆಂಡ್‌ನ ಮೊದಲ ಇನ್ನಿಂಗ್ಸ್‌ನ 193 ರನ್ನುಗಳ ಸಾಧಾರಣ ಮೊತ್ತಕ್ಕೆ ದಿಟ್ಟ ಉತ್ತರ ನೀಡಿರುವ ಭಾರತ ತಂಡ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್‌ಮನ್‌ಗಳು ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಎರಡನೇ ದಿನದಂತ್ಯಕ್ಕೆ 82 ಓವರುಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 292 ರನ್ ಗಳಿಸಿದ್ದು, 99 ರನ್ನುಗಳ ಮಹತ್ವದ ಮುನ್ನಡೆ ದಾಖಲಿಸಿದೆ. ಅಜೇಯ ಅರ್ಧಶತಕ ದಾಖಲಿಸಿರುವ ಸಚಿನ್ ತೆಂಡೂಲ್ಕರ್ ಅವರು ಮೂರನೇ ದಿನದಾಟದಲ್ಲಿ ತಮ್ಮ 50ನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಲಿದ್ದಾರೆಯೇ ಎಂಬುದನ್ನು ಅಭಿಮಾನಿಗಳು ಭಾರಿ ನಿರೀಕ್ಷೆಯಿಂದ ಕಾದು ನೋಡುತ್ತಿದ್ದಾರೆ. 126 ಎಸೆತಗಳನ್ನು ಎದುರಿಸಿರುವ ಸಚಿನ್ ಏಳು ಬೌಂಡರಿಗಳ ನೆರವಿನಿಂದ ಅಜೇಯ 57 ರನ್ ಗಳಿಸಿದ್ದಾರೆ.ಅದೇ ರೀತಿ ಸಚಿನ್‌ಗೆ ಉತ್ತಮ ಬೆಂಬಲ ನೀಡುತ್ತಿರುವ 'ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಕೂಡಾ 69 ರನ್ ಗಳಿಸಿದ್ದು, ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದಕ್ಕೂ ಮೊದಲು ಮೊದಲ ವಿಕೆಟ್‌ಗೆ 113 ರನ್ನುಗಳ ಜತೆಯಾಟ ನೀಡಿದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಭಾರತಕ್ಕೆ ಬಿರುಸಿನ ಆರಂಭವೊದಗಿಸಿದರು. ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ ಸೆಹ್ವಾಗ್ 12 ಬೌಂಡರಿಗಳ ನೆರವಿನಿಂದ 78 ರನ್ ಗಳಿಸಿದರು. ಅದೇ ರೀತಿ ಫಾರ್ಮ್ ಮರಳಿ ಪಡೆದಿರುವ ಗೌತಿ 74 ರನ್ನುಗಳ ಉಪಯುಕ್ತ ನೆರವು ನೀಡಿದರು. ಈ ಮುನ್ನ ಭಾರತೀಯ ಬೌಲರುಗಳ ಸರ್ವಾಂಗೀಣ ಪ್ರದರ್ಶನಕ್ಕೆ ತತ್ತರಿಸಿದ ನ್ಯೂಜಿಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 66.3 ಓವರುಗಳಲ್ಲಿ 193 ರನ್ನುಗಳಿಗೆ ಆಲೌಟಾಗಿತ್ತು 148
/7 ಎಂಬಲ್ಲಿದ್ದ ಬ್ಯಾಟಿಂಗ್ ಮುಂದುವರಿಸಿದ್ದ ಕಿವೀಸ್ ಮತ್ತೆ 45 ರನ್ ಪೇರಿಸುವುದೆಡೆ ಉಳಿದ ಮೂರು ವಿಕೆಟುಗಳನ್ನು ಕಳೆದುಕೊಂಡಿತ್ತು. ಮಾರಕ ದಾಳಿ ಸಂಘಟಿಸಿದ ಇಶಾಂತ್ ಶರ್ಮಾ ನಾಲ್ಕು, ಪ್ರಗ್ಯಾನ್ ಓಜಾ ಮೂರು, ಎಸ್. ಶ್ರೀಶಾಂತ್ ಎರಡು ಹಾಗೂ ಹರಭಜನ್ ಸಿಂಗ್ ಒಂದು ವಿಕೆಟ್ ಕಿತ್ತು ಮಿಂಚಿದರು. ಬ್ರೆಡಮ್ ಮೆಕಲಮ್ 40 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ ಸ್ವಲ್ಪ ಹೊತ್ತು ಅಪಾಯ ಸೃಷ್ಟಿಸಿದ ಟಿಮ್ ಸೌಥಿ 38 ರನ್ ಗಳಿಸಿದರು. ಪಿಚ್ ತೇವಯುಕ್ತವಾಗಿದ್ದರ ಹಿನ್ನೆಲೆಯಲ್ಲಿ ಮೊದಲ ದಿನದಾಟದಲ್ಲಿ 34 ಓವರುಗಳ ಆಟ ನಷ್ಟವಾಗಿತ್ತು. ಒಟ್ಟಾರೆಯಾಗಿ ಮೊದಲೆರಡು ಪಂದ್ಯ ಸಮಬಲಗೊಂಡಿದ್ದರ ಹಿನ್ನೆಲೆಯಲ್ಲಿ ಈ ಪಂದ್ಯದಲ್ಲಿ ಜಯ ದಾಖಲಿಸಿದಲ್ಲಿ ಭಾರತ ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಳ್ಳಲಿದೆ. ಭಾರತ-ನ್ಯೂಜಿಲೆಂಡ್ ಕನ್ನಡ ಲೈವ್ ಸ್ಕೋರ್ ಬೋರ್ಡ್‌ಗಾಗಿ ಇಲ್ಲಿ ಕ್ಲಿಕ್ಕಿಸಿ....ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ