ಹರಿಯಾಣ ವೇಗಿಗಳಿಗೆ ದಿಂಡುರುಳಿದ ಕರ್ನಾಟಕ 222ಕ್ಕೆ ಆಲೌಟ್
ರಾಹಟಾಕ್ , ಗುರುವಾರ, 18 ನವೆಂಬರ್ 2010 (18:37 IST)
ಇಲ್ಲಿ ಹರಿಯಾಣ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಸೂಪರ್ ಲೀಗ್ ಹಂತದ ಪಂದ್ಯದಲ್ಲಿ ಬ್ಯಾಟಿಂಗ್ ಕುಸಿತ ಕಂಡಿರುವ ಕರ್ನಾಟಕ ತಂಡವು 71. 2 ಓವರುಗಳಲ್ಲಿ 222 ರನ್ನುಗಳಿಗೆ ಸರ್ವಪತನಗೊಂಡಿದೆ. ಜವಾಬು ನೀಡಲಾರಂಭಿಸಿದ ಹರಿಯಾಣ ತಂಡವು ಎರಡನೇ ದಿನದಂತ್ಯಕ್ಕೆ 52 ಓವರುಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 146 ರನ್ ಗಳಿಸಿದ್ದು, ದಿಟ್ಟ ಉತ್ತರ ನೀಡಿದೆ. 84
/3 ಎಂಬಲ್ಲಿದ್ದ ಬ್ಯಾಟಿಂಗ್ ಮುಂದುವರಿಸಿದ್ದ ಕರ್ನಾಟಕಕ್ಕೆ ರಾಬಿನ್ ಉತ್ತಪ್ಪ (48) ಮತ್ತು ಮನೀಷ್ ಪಾಂಡೆ (37) ಉತ್ತಮ ಆರಂಭವೊದಗಿಸಲು ಯತ್ನಿಸಿದ್ದರು. ಆದರೆ ನಿಖರ ದಾಳಿ ಸಂಘಟಿಸಿದ ಹರಿಯಾಣ ವೇಗಿಗಳಾದ ಜೊಗಿಂದರ್ ಶರ್ಮಾ ಮತ್ತು ಎಸ್. ಭುದ್‌ವೀರ್ ಕರ್ನಾಟಕದ ಓಟಕ್ಕೆ ಬ್ರೇಕ್ ಹಾಕಿದರು. ಉತ್ತಮ ಆರಂಭ ಪಡೆದರ ಹೊರತಾಗಿಯೂ ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ಉತ್ತಪ್ಪ ಹಾಗೂ ಪಾಂಡೆ ವಿಫಲರಾದರು. ನಂತರ ಬಂದ ಅಮಿತ್ ವರ್ಮಾ (1) ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ನಾಯಕ ವಿನಯ್ ಕುಮಾರ್ ಆಕರ್ಷಕ ಅರ್ಧಶತಕ ದಾಖಲಿಸುವ ಮೂಲಕ ತಂಡವನ್ನು 200ರ ಗಡಿ ದಾಟಿಸುವಲ್ಲಿ ನೆರವಾದರು. ಹರಿಯಾಣ ವೇಗಿಗಳನ್ನು ದಿಟ್ಟವಾಗಿ ಎದುರಿಸಿದ ವಿನಯ್ 69 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು. ಉಳಿದಂತೆ ಸುನಿಲ್ ಜೋಶಿ (14), ಉದಿತ್ ಪಟೇಲ್ (0), ಅಭಿಮನ್ಯು ಮಿಥುನ್ (20) ಮತ್ತು ಎಸ್. ಅರವಿಂದ್ (2*) ರನ್ ಗಳಿಸಿದರು. ಮಾರಕ ದಾಳಿ ಸಂಘಟಿಸಿದ ಜೊಗಿಂದರ್ ಮತ್ತು ಭುದ್‌ವೀರ್ ತಲಾ ಐದು ವಿಕೆಟ್ ಕಿತ್ತು ಮಿಂಚಿದರು. ನಂತರ ಬ್ಯಾಟಿಂಗ್ ಆರಂಭಿಸಿದ ಹರಿಯಾಣಕ್ಕೆ ಎನ್. ಸೈನಿ ಶ್ರ (57*) ಮತ್ತು ಸುನ್ನಿ ಸಿಂಗ್ (53) ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ನೆರವಾದರು. ನಂತರ ಬಂದ ಹೇಮಾಂಗ್ ಬದಾನಿ ಅಜೇಯ 25 ರನ್ ಗಳಿಸಿದ್ದು, ಆರಂಭಿಕ ಸೈನಿ ಜತೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಒಟ್ಟಿನಲ್ಲಿ ಪಂಜಾಬ್ ವಿರುದ್ಧದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದ ಕರ್ನಾಟಕ ಇಲ್ಲಿ ಅದೇ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ. ಆದರೆ ತೃತೀಯ ದಿನದಾಟದಲ್ಲಿ ಬೌಲರುಗಳು ತಿರುಗಿ ಬೀಳುವ ವಿಶ್ವಾಸದಲ್ಲಿದ್ದಾರೆ. ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ