ಮಹಿ ಪಡೆಗೆ ಆಘಾತ; ಅಂತಿಮ ಪಂದ್ಯಕ್ಕೆ ಜಹೀರ್ ಅಲಭ್ಯ
ಹೈದರಾಬಾದ್ , ಬುಧವಾರ, 17 ನವೆಂಬರ್ 2010 (10:06 IST)
ನಾಗ್ಪುರದಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಅಂತಿಮ ಟೆಸ್ಟ್ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಘಾತಕ್ಕೊಳಗಾಗಿದೆ. ಹೊಟ್ಟೆ ಸ್ನಾಯು ಸೆಳೆತೆದಿಂದ ಬಳಲುತ್ತಿರುವ ಎಡಗೈ ವೇಗಿ ಜಹೀರ್ ಖಾನ್ ನಾಗ್ಪುರ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದು, ಸೌರಾಷ್ಟ್ರದ ಯುವ ಎಡಗೈ ವೇಗಿ ಜೈದೇವ್ ಉನದ್ಕತ್‌ಗೆ ಸ್ಥಾನ ನೀಡಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳು ಸಮಬಲಗೊಂಡಿದ್ದರ ಹಿನ್ನೆಲೆಯಲ್ಲಿ ಅಂತಿಮ ಟೆಸ್ಟ್ ಪಂದ್ಯ ಇತ್ತಂಡಗಳಿಗೂ ನಿರ್ಣಾಯಕವೆನಿಸಿದೆ. ಈ ಹಿನ್ನೆಲೆಯಲ್ಲಿ ಅಗ್ರ ಭಾರತ ತಂಡಕ್ಕೆ ಜಹೀರ್ ಅಲಭ್ಯತೆಯು ಕಾಡಲಿದೆ. ಸರಣಿಯುದ್ಧಕ್ಕೂ ಭಾರತೀಯ ಬೌಲರುಗಳು ಅದರಲ್ಲೂ ವೇಗಿಗಳು ಪ್ರಭಾವಿ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇದೀಗ ಜಹೀರ್ ಕೂಡಾ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಅಂತಿಮ ಟೆಸ್ಟ್‌ನಲ್ಲಿ ಮೇಲುಗೈ ಸಾಧಿಸಬಹುದೇ ಎಂಬುದು ಕುತೂಹಲವೆನಿಸಿದೆ. ಕಿವೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ನಾಲ್ಕನೇ ದಿನದಲ್ಲಿ ಜಹೀರ್ ಗಾಯದ ಸಮಸ್ಯೆ ಎದುರಿಸಿದ್ದರು. ಇದರಿಂದಾಗಿ ಮೈದಾನ ತೊರೆದಿದ್ದ ಅವರು ಐದನೇ ದಿನ ಕೇವಲ ಮೂರು ಓವರುಗಳನ್ನಷ್ಟೇ ಎಸೆದಿದ್ದರು. ಜಹೀರ್ ಸ್ಥಾನಕ್ಕೆ ಜೈದೇವ್ ಉನದ್ಕತ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಎನ್. ಶ್ರೀನಿವಾಸನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಆರು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಉನದ್ಕತ್ 26.34ರ ಸರಾಸರಿಯಲ್ಲಿ 26 ವಿಕೆಟುಗಳನ್ನು ಕಿತ್ತಿದ್ದಾರೆ. ಉಲ್ಲದೆ ನ್ಯೂಜಿಲೆಂಡ್‌ನಲ್ಲಿ ನಡೆದ 19 ವರ್ಷದವರೊಳಗಿನ ವಿಶ್ವಕಪ್ ತಂಡದಲ್ಲಿಯೂ ಸ್ಥಾನ ಗಿಟ್ಟಿಸಿಕೊಂಡಿದ್ದರು. ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಅಂತಿಮ ಟೆಸ್ಟ್ ನವೆಂಬರ್ 20, ಶನಿವಾರದಂದು ನಾಗ್ಪುರದಲ್ಲಿ ಆರಂಭವಾಗಲಿದೆ. ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ