Select Your Language

Notifications

webdunia
webdunia
webdunia
webdunia

ಟ್ವೆಂಟಿ-20 ವಿಶ್ವಕಪ್‌ನಿಂದ ಸೆಹ್ವಾಗ್ ಔಟ್

ಟ್ವೆಂಟಿ-20 ವಿಶ್ವಕಪ್‌ನಿಂದ ಸೆಹ್ವಾಗ್ ಔಟ್
ಲಂಡನ್ , ಮಂಗಳವಾರ, 9 ಜೂನ್ 2009 (20:14 IST)
ಭುಜ ಗಾಯದ ನೋವಿನಿಂದ ಬಳಲುತ್ತಿರುವ ಟೀಮ್ ಇಂಡಿಯಾ ಆರಂಭಿಕ ಹೊಡೆಬಡಿ ದಾಂಡಿಗ ವೀರೇಂದ್ರ ಸೆಹ್ವಾಗ್ ಪ್ರಸಕ್ತ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಿಂದ ಹೊರ ಬಿದ್ದಿದ್ದಾರೆ.

ಭುಜದ ಗಾಯದಿಂದ ಬಳಲುತ್ತಿರುವ ಕಾರಣ ಅವರನ್ನು ಶಸ್ತ್ರಚಿಕಿತ್ಸೆಗೊಳಪಡಿಸುವಂತೆ ಸಲಹೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಅವರ ದೈಹಿಕ ಕ್ಷಮತೆ ವರದಿಯನ್ನಾಧರಿಸಿ ಇಂದು ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿದ್ದು, ನಂತರ ದಕ್ಷಿಣ ಆಫ್ರಿಕಾದ ವೈದ್ಯರೊಬ್ಬರು ಸೆಹ್ವಾಗ್‌ರಿಗೆ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ. ಈ ವಿಚಾರವಿನ್ನೂ ಅಧಿಕೃತವಾಗಿ ಪ್ರಕಟಗೊಂಡಿಲ್ಲ.

ಸ್ಫೋಟಕ ದಾಂಡಿಗ ಸೆಹ್ವಾಗ್ ಬಾಂಗ್ಲಾದೇಶದ ವಿರುದ್ಧದ ವಿಶ್ವಕಪ್ ಆರಂಭಿಕ ಪಂದ್ಯದಿಂದ ಹಾಗೂ ಇತರ ಎರಡು ಅಭ್ಯಾಸ ಪಂದ್ಯಗಳಿಂದಲೂ ಈ ಹಿಂದೆ ಹೊರಗುಳಿದಿದ್ದರು.

ಸೆಹ್ವಾಗ್ ಗಾಯಾಳುವಾದಾಗಿನಿಂದ ನಾಯಕ ಮಹೇಂದ್ರ ಸಿಂಗ್ ಧೋನಿಯವರು ಗೌತಮ್ ಗಂಭೀರ್ ಜತೆ ಆರಂಭಿಕ ಜತೆಗಾರನಾಗಿ ರೋಹಿತ್ ಶರ್ಮಾರನ್ನು ಕಣಕ್ಕಿಳಿಸಿದ್ದರು. ಇದರಲ್ಲಿ ಯಶಸ್ಸು ಕಂಡಿದ್ದ ಟೀಮ್ ಇಂಡಿಯಾ ಟ್ವೆಂಟಿ-20 ವಿಶ್ವಕಪ್‌ನ ಉಳಿದೆಲ್ಲಾ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ರೋಹಿತ್ ಶರ್ಮಾರನ್ನೇ ಬಹುತೇಕ ಮುಂದುವರಿಸಲಿದೆ ಎಂದು ಹೇಳಲಾಗಿದೆ.

ಕಳೆದ ಟ್ವೆಂಟಿ-20 ವಿಶ್ವಕಪ್ ಆವೃತ್ತಿಯ ಜಯಭೇರಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ವೀರೇಂದ್ರ ಸೆಹ್ವಾಗ್ ಇದೀಗ ಈ ಬಾರಿಯ ಕೂಟದಿಂದ ಬಹುತೇಕ ಹೊರ ಬಿದ್ದಿರುವುದರಿಂದ ಟೀಮ್ ಇಂಡಿಯಾಕ್ಕೆ ದೊಡ್ಡ ಹೊಡೆತವಿದು ಎಂದೇ ಹೇಳಲಾಗುತ್ತಿದೆ.

ಕೆಲ ದಿನಗಳ ಹಿಂದೆ ಸೆಹ್ವಾಗ್ ಆಯ್ಕೆ ವಿಚಾರದಲ್ಲಿ ನಾಯಕ ಧೋನಿ ಅಸಮಾಧಾನಗೊಂಡಿದ್ದಾರೆ ಮತ್ತು ಅವರಿಬ್ಬರ ನಡುವೆ ಎಲ್ಲವೂ ಸರಿಯಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ನಂತರ ಇಡೀ ತಂಡವನ್ನು ಪತ್ರಿಕಾಗೋಷ್ಠಿಗೆ ಕರೆತಂದು ಒಗ್ಗಟ್ಟು ಪ್ರದರ್ಶಿಸಿದ್ದ ಧೋನಿ, ನಮ್ಮ ನಡುವೆ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಸೆಹ್ವಾಗ್ ಅನುಪಸ್ಥಿತಿಗೆ ವೈದ್ಯಕೀಯ ಕಾರಣಗಳೀಗ ದೃಢಪಟ್ಟಿರುವುದರಿಂದ ಮಾಧ್ಯಮ ವಲಯಗಳಲ್ಲಿ ತೇಲಾಡುತ್ತಿದ್ದ 'ಭಿನ್ನಮತ' ಬಣ್ಣ ಕಳೆದುಕೊಂಡಂತಾಗಿದೆ.

Share this Story:

Follow Webdunia kannada