ಮತ್ತೆಮ್ಮೆ ರಾದ್ಧಾಂತ ಮಾಡಿಕೊಂಡು ಆಸ್ಟ್ರೇಲಿಯಾದ ಟ್ವೆಂಟಿ20 ವರ್ಲ್ಡ್ ಕಪ್ ತಂಡದಿಂದ ಹೊರದಬ್ಬಿಸಿಕೊಂಡಿರುವ ವಿವಾದಗಳ ರಾಜ ಕ್ರಿಕೆಟಿಗ ಸೈಮಂಡ್ಸ್‌ಗೆ, ತಂಡದ ಸಹವರ್ತಿಗಳು ಅನುಕಂಪ ಸೂಚಿಸಿದ್ದಾರೆ.
ಸೈಮಂಡ್ಸ್‌ನನ್ನು 'ವಿಶ್ವದ ಮಹಾನ್ ಹುಡುಗ' ಎಂದು ಬಣ್ಣಿಸಿರುವ ವೇಗಿ ಬ್ರೆಟ್ ಲೀ, ಸೈಮಂಡ್ಸ್ ತಂಡಕ್ಕೆ ಮತ್ತೆ ಮರಳಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಂತಹ ಆಟಗಾರನನ್ನು ಕಳೆದುಕೊಳ್ಳುವುದರಿಂದ ತಂಡದಲ್ಲಿ ದೊಡ್ಡ ರಂಧ್ರ ಉಳಿದುಕೊಂಡಂತಾಗುತ್ತದೆ, ಅವರು ಸದ್ಯವೇ ತಂಡಕ್ಕೆ ಮರಳಲಿದ್ದಾರೆ ಎಂದು ಬ್ರೆಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅದಾಗ್ಯೂ, ಸೈಮಂಡ್ಸ್‌ಗೆ ಅವಶ್ಯವಿರುವ ಸಹಾಯವನ್ನು ಒದಗಿಸುವುದಾಗಿ ಹೇಳಿದ್ದಾರೆ.
ಟ್ವೆಂಟಿ20 ವಿಶ್ವಕಪ್‌ಗೆ ಸೈಮಂಡ್ಸ್‌ನನ್ನು ಕಳೆದುಕೊಳ್ಳುತ್ತೇವೆ ಎಂಬ ಚಿಂತೆ ಲೀಯನ್ನು ಕಾಡಿದರೂ, ತನ್ನ ತಂಡಕ್ಕೆ ಮುಂದಿರುವ ಜವಾಬ್ದಾರಿಯ ಬಗ್ಗೆ ಗಮನ ಹರಿಸಲು ಒತ್ತಾಯಿಸಿದ್ದಾರೆ.
ಸೈಮಂಡ್ಸ್ ಅವರನ್ನು 'ಮದ್ಯ ಸೇವನೆ ಸಂಬಂಧಿತ' ಪ್ರಕರಣವೊಂದರ ಹಿನ್ನೆಲೆಯಲ್ಲಿ ಓವಲ್‌ನಲ್ಲಿ ತಂಡದ ಪ್ರಾಕ್ಟೀಸ್ ಸೆಶನ್ ತಪ್ಪಿಸಿಕೊಂಡಿದ್ದಕ್ಕಾಗಿ ಐಸಿಸಿ ವಿಶ್ವ ಟ್ವೆಂಟಿ-20 ಕಪ್ ಕೂಟದಿಂದಲೇ ಕ್ರಿಕೆಟ್ ಆಸ್ಟ್ರೇಲಿಯಾ ಮನೆಗೆ ಕಳುಹಿಸಿದೆ.
ಈ ಹಿಂದೆಯೂ ಅಶಿಸ್ತಿಗಾಗಿ ತಂಡದಿಂದ ಅಮಾನತಿಗೊಳಗಾಗಿದ್ದ ಸೈಮಂಡ್ಸ್ ಕಳೆದ ತಿಂಗಳಷ್ಟೇ ಸಿಎ ಗುತ್ತಿಗೆ ಮರಳಿ ಗಳಿಸಿಕೊಂಡಿದ್ದು, ಅದು ಕೂಡ ಈಗ ಪುನರ್ವಿಮರ್ಶೆಯ ಪರಿಸ್ಥಿತಿಯಲ್ಲಿದೆ ಎಂದು ಸೂತರ್‌ಲ್ಯಾಂಡ್ ಹೇಳಿದ್ದಾರೆ.
ಸೈಮಂಡ್ಸ್ ಕಳೆದ ಐಪಿಎಲ್ ಸರಣಿಯಲ್ಲಿ ಪ್ರಶಸ್ತಿ ವಿಜೇತ ಡೆಕ್ಕನ್ ಚಾರ್ಜರ್ಸ್ ಪರವಾಗಿ ಅತ್ಯುತ್ತಮ ನಿರ್ವಹಣೆ ತೋರಿದ್ದು, ಆಸ್ಟ್ರೇಲಿಯಾ ತಂಡಕ್ಕೆ ಅವರ ಗೈರು ಹಾಜರಿಯು ತೀವ್ರ ಕೊರತೆಯಾಗಲಿದೆ. ಶನಿವಾರ ಮೊದಲ ಪಂದ್ಯದಲ್ಲಿ ರಿಕಿ ಪಾಂಟಿಂಗ್ ಬಳಗವು ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.
ಈ ಶಿಕ್ಷೆಯೊಂದಿಗೆ ಸೈಮಂಡ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನ ಬಹುತೇಕ ಕೊನೆಗೊಂಡಂತಾಗಿದೆ. ಕಳೆದ ತಿಂಗಳು ಘೋಷಿಸಲಾದ ಆಶಸ್ ಸರಣಿಯ ಆಟಗಾರರ ಪಟ್ಟಿಯಲ್ಲಿಯೂ ಸೈಮಂಡ್ಸ್ ಹೆಸರಿರಲಿಲ್ಲ.