Select Your Language

Notifications

webdunia
webdunia
webdunia
webdunia

ತಂಡಕ್ಕೆ ಆಸರೆಯಾಗುವುದು ತೃಪ್ತಿ ನೀಡುತ್ತದೆ: ದ್ರಾವಿಡ್

ತಂಡಕ್ಕೆ ಆಸರೆಯಾಗುವುದು ತೃಪ್ತಿ ನೀಡುತ್ತದೆ: ದ್ರಾವಿಡ್
ಹ್ಯಾಮಿಲ್ಟನ್ , ಗುರುವಾರ, 19 ಮಾರ್ಚ್ 2009 (17:40 IST)
ಬೃಹತ್ ಮೊತ್ತಗಳತ್ತ ತಾನು ಕಣ್ಣು ಹಾಕಿಲ್ಲ; ಅದಕ್ಕಿಂತಲೂ ಹೆಚ್ಚು ತಂಡಕ್ಕೆ ತನ್ನಿಂದಾದ ಕೊಡುಗೆ ನೀಡುವುದು ತೃಪ್ತಿ ನೀಡುತ್ತದೆ ಎಂದು ಕಳೆದ ವರ್ಷ ಲಯ ಕಳೆದುಕೊಂಡು ರನ್ ಬರ ಅನುಭವಿಸಿದ್ದ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

"ನಾನೆಷ್ಟು ರನ್ ಅಥವಾ ಶತಕ ಗಳಿಸಿದ್ದೇನೆ ಎನ್ನುವುದು ವಿಚಾರವಲ್ಲ. ದೇಶ ಅಥವಾ ವಿದೇಶಗಳಲ್ಲಿ ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ತಂಡಕ್ಕೆ ತಾನು ಸಹಕಾರಿಯಾಗುವುದು ಮುಖ್ಯ. ಇದು ನನಗೆ ಸಂತೃಪ್ತಿ-ಸಮಾಧಾನವನ್ನು ನೀಡುತ್ತದೆ" ಎಂದು ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 66 ರನ್ ಗಳಿಸಿದ ದ್ರಾವಿಡ್ ತಿಳಿಸಿದರು.

ನಾನು ಕ್ರೀಡೆಯನ್ನು ನೈಜವಾಗಿ ಇಷ್ಟಪಡುತ್ತಿದ್ದೇನೆ. ನಾನು ಚಿಕ್ಕಂದಿನಿಂದಲೇ ಆಟವನ್ನು ಆಡುತ್ತಾ ಬಂದವನು. ಬ್ಯಾಟಿಂಗ್ ನನ್ನ ಇಷ್ಟದ ಕೆಲಸ. ಅಲ್ಲದೆ ಜಯಗಳಿಸುವುದು ಮತ್ತು ಜಯಗಳಿಸಲು ಸಹಾಯ ಮಾಡುವುದು ನನ್ನ ಅಭಿಲಾಷೆ. ಇಂತಹ ವಿಚಾರಗಳೇ ನನಗೀಗ ಸವಾಲುಗಳುಗಳಾಗಿವೆ ಎಂದ ದ್ರಾವಿಡ್, ಆಟದ ನಿಧಾನಗತಿ ಮತ್ತು ಸರಾಗತೆ ಕೂಡ ತನಗಿಷ್ಟ ಎಂದು ಹೇಳಿಕೊಂಡಿದ್ದಾರೆ.

ಭಾರತೀಯ ಕ್ರಿಕೆಟ್‌ಗೆ ಈಗ ಸಂಭ್ರದ ಸಮಯ. ನಾವೀಗ ಟೆಸ್ಟ್ ಮತ್ತು ಏಕದಿನಗಳೆರಡರಲ್ಲಿಯೂ ಉತ್ತಮ ಕ್ರಿಕೆಟನ್ನೇ ಆಡುತ್ತಿದ್ದೇವೆ. ಈಗ ಕೆಲವು ಯುವ ಆಟಗಾರರೂ ಬೆಳಕಿಗೆ ಬರುತ್ತಿದ್ದು, ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹಾಗಾಗಿ ಇಂತಹ ಸಂದರ್ಭದಲ್ಲಿ ತಂಡದ ಭಾಗವಾಗಿರುವುದು ಉತ್ತಮ ಎನಿಸುತ್ತಿದೆ. ನಾವೀಗ ಉತ್ತಮ ಸ್ಥಿತಿಯನ್ನು ಕಾಯ್ದುಕೊಂಡಿದ್ದೇವೆ. ಒಟ್ಟಾರೆ ನಾನು ಕ್ರಿಕೆಟ್ ಆಟವನ್ನು ಆನಂದಿಸುತ್ತೇನೆ ಎಂದು 2007ರ ಸೆಪ್ಟೆಂಬರ್‌ನಲ್ಲಿ ನಾಯಕತ್ವ ತೊರೆದ ದ್ರಾವಿಡ್ ತಿಳಿಸಿದರು.

ಕ್ಯಾಚ್ ಹಿಡಿಯುವುದೆಂದರೆ ಪಂದ್ಯವೊಂದರಲ್ಲಿ ರನ್ ಗಳಿಸಿದ ಹಾಗೆ ಎಂದು ಹೋಲಿಸಿರುವ ಅವರು, "ನಿನ್ನೆ ಇನ್ನೊಂದು ಕ್ಯಾಚ್ ಹಿಡಿಯಲು ಸಾಧ್ಯವಾಗುತ್ತಿದ್ದರೆ ದಾಖಲೆ ನನ್ನ ಹೆಸರಿಗೆ ಬರುತ್ತಿತ್ತು. ನಾನು ಹಲವು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದೇನೆ. ಕ್ಯಾಚ್‌ಗಳನ್ನು ಪಡೆಯುವುದು ಕೂಡ ಉತ್ತಮ ಅನುಭವ. ಕ್ಯಾಚ್‌ಗಳನ್ನು ಪಡೆಯುವುದೆಂದರೆ ಒಂದು ರೀತಿಯಲ್ಲಿ ರನ್ ಗಳಿಸಿದಷ್ಟೇ ಸಂತೋಷವನ್ನು ನೀಡುತ್ತದೆ" ಎಂದರು.

ಹಲವು ಉತ್ತಮ ಬೌಲರುಗಳ ಎಸೆತಗಳ ಕ್ಯಾಚುಗಳನ್ನು ತಾನು ಪಡೆದಿದ್ದೇನೆ ಎಂದ ಅವರು, ತಂಡದಲ್ಲಿ 12-13 ವರ್ಷಗಳಿಂದ ಆಡುತ್ತಿರುವುದು ತನ್ನ ಅದೃಷ್ಟ ಎಂದು ಬಣ್ಣಿಸಿದರು. "ನಮ್ಮಲ್ಲಿನ ಶ್ರೇಷ್ಠಾತಿಶ್ರೇಷ್ಠ ಬೌಲರುಗಳಿಂದಾಗಿ ನನಗಿಷ್ಟು ಕ್ಯಾಚುಗಳನ್ನು ಪಡೆಯಲು ಸಾಧ್ಯವಾಯಿತು ಮತ್ತು ಅವಕಾಶ ಸಿಕ್ಕಿತು. ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಜಹೀರ್ ಖಾನ್, ಅನಿಲ್ ಕುಂಬ್ಳೆ ಮತ್ತು ಹರಭಜನ್ ಸಿಂಗ್ ಸೇರಿದಂತೆ ಹಲವರ ಎಸೆತಗಳ ಕ್ಯಾಚುಗಳನ್ನು ತಾನು ಪಡೆದಿದ್ದೇನೆ" ಎಂದು 181 ಕ್ಯಾಚುಗಳನ್ನು ಪಡೆದು ಮಾರ್ಕ್ ವಾ ದಾಖಲೆಯನ್ನು ಸರಿಗಟ್ಟಿದ ದ್ರಾವಿಡ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Share this Story:

Follow Webdunia kannada