ಟೀಮ್ ಇಂಡಿಯಾ ಕಂಡ ಆಕ್ರಮಣಕಾರಿ ಹಾಗೂ ಯಶಸ್ವೀ ಕಪ್ತಾನ ಸೌರವ್ ಗಂಗೂಲಿಯವರಿಗೆ ಜನವರಿ 18ರ ಭಾನುವಾರ ಸಂಜೆ ವರ್ಣರಂಜಿತ ಸಮಾರಂಭದಲ್ಲಿ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಒಂದು ಕಿಲೋ ತೂಕದ ಚಿನ್ನದ ಬ್ಯಾಟು ಹಾಗೂ ವಿಕೆಟನ್ನು ಉಡುಗೊರೆಯಾಗಿ ನೀಡಿ ಸನ್ಮಾನ ಮಾಡಲಿದೆ.
"ಇದು ಸಂಪೂರ್ಣವಾಗಿ ಕ್ರಿಕೆಟ್ ಕೇಂದ್ರೀಕೃತ ಕಾರ್ಯಕ್ರಮ. ಹಾಗಾಗಿ ಇಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಿರುವುದಿಲ್ಲ" ಎಂದು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಪತ್ರಕರ್ತರಿಗೆ ತಿಳಿಸಿದರು.
ಕಾರ್ಯಕ್ರಮದ ಪ್ರಮುಖ ಅತಿಥಿಯಾಗಿ ಲೋಕಸಭೆಯ ಸ್ಪೀಕರ್ ಸೋಮನಾಥ ಚಟರ್ಜಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಗಂಗೂಲಿಯವರ ಆಟದ ಅವಧಿಯ ಕಪ್ತಾನರುಗಳ ಅಭಿಪ್ರಾಯ ಮತ್ತು ಗಂಗೂಲಿ ಕ್ರಿಕೆಟ್ ಜೀವನವನ್ನು ಮೆಲುಕು ಹಾಕುವ 15 ನಿಮಿಷದ ವಿಡಿಯೋ ಚಿತ್ರಣವನ್ನು ಪ್ರದರ್ಶಿಸಲಾಗುತ್ತದೆ. ಚಿನ್ನದ ಬ್ಯಾಟಿನಲ್ಲಿ ಗಂಗೂಲಿಯವರ ಕ್ರಿಕೆಟ್ ದಾಖಲೆಗಳನ್ನೂ ನಮೂದಿಸಲಾಗಿರುತ್ತದೆ.
ಕಾರ್ಯಕ್ರಮದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಹಾಗೂ ಅದರ ಸಹ ಸಂಸ್ಥೆಗಳು ಭಾಗವಹಿಸಲಿವೆ. ಗಂಗೂಲಿಯವರ ಕುಟುಂಬವನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ದಾಲ್ಮಿಯಾ ತಿಳಿಸಿದ್ದಾರೆ.
ಈ ಚಿನ್ನದ ಬ್ಯಾಟಿಗೆ ಸರಿಸುಮಾರು 25 ಲಕ್ಷ ರೂಪಾಯಿಗಳಷ್ಟು ವೆಚ್ಚವಾಗಿರಬಹುದು ಎಂದು ಅಂದಾಜಿಸಲಾಗಿದೆ. ನವೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಗುಡ್ ಬೈ ಹೇಳಿದ್ದ ಗಂಗೂಲಿಯವರನ್ನು ಈ ರೀತಿಯಾಗಿ ಅದ್ಧೂರಿಯಾಗಿ ಸನ್ಮಾನಿಸಲು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ನಿರ್ಧರಿಸಿದ್ದು ಭಾನುವಾರ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಚಿನ್ನ ಹಾಗೂ ಬೆಳ್ಳಿಯಿಂದ ನಿರ್ಮಿತವಾಗಿರುವ ಬ್ಯಾಟಿನೊಂದಿಗೆ ಒಂದು ವಿಕೆಟನ್ನು ಕೂಡ ಉಡುಗೊರೆಯಾಗಿ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
ಜನವರಿ 18ರ ಭಾನುವಾರ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸಂಜೆ 6 ಗಂಟಿಯಿಂದ ಮುಂದಿನ ಒಂದು ಗಂಟೆ ಕಾಲ ಕಾರ್ಯಕ್ರಮ ನಡೆಯಲಿದೆ.